ಮಧ್ಯಪ್ರದೇಶ | ರೈತರ ನಿಧಿಯ ಶೇ. 90ರಷ್ಟು ಹಣವನ್ನು ಕಾರುಗಳಿಗೆ ಇಂಧನ ಭರ್ತಿ ಮಾಡಲು ಬಳಕೆ : ಸಿಎಜಿ ವರದಿ
ಸಾಂದರ್ಭಿಕ ಚಿತ್ರ (PTI)
ಭೋಪಾಲ್: ಮಧ್ಯಪ್ರದೇಶದಲ್ಲಿ ರೈತರಿಗೆ ಅತ್ಯಗತ್ಯವಾಗಿದ್ದಾಗ ಬೆಂಬಲವಾಗಿ ಬಳಕೆಯಾಗಬೇಕಿದ್ದ ನಿಧಿಯನ್ನು ಐದು ವರ್ಷಗಳಷ್ಟು ದೀರ್ಘಕಾಲ ಸರಕಾರಿ ವಾಹನಗಳಿಗೆ ಇಂಧನ ಭರ್ತಿ ಮಾಡಲು ಬಳಸಲಾಗಿರುವ ಆಘಾತಕಾರಿ ಸಂಗತಿ ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ ಎಂದು ndtv.com ವರದಿ ಮಾಡಿದೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಈ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ರೈತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿದ್ದ ರಸಗೊಬ್ಬರ ಅಭಿವೃದ್ಧಿ ನಿಧಿಯನ್ನು ಅಧಿಕಾರಿಗಳ ವಾಹನಗಳ ಇಂಧನ ಭರ್ತಿಗೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಮಧ್ಯಪ್ರದೇಶ ರಾಜಕೀಯದಲ್ಲಿ ಹೊಸ ಬಿರುಗಾಳಿಯನ್ನೇ ಸೃಷ್ಟಿಸಿದೆ.
2017-18ನೇ ಸಾಲಿನಿಂದ 2021-22ನೇ ಸಾಲಿನವರೆಗೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಸದ್ಯ ಕೇಂದ್ರ ಕೃಷಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಎರಡು ಅವಧಿಯ ಬಿಜೆಪಿ ಸರಕಾರಗಳ ಆಡಳಿತದಲ್ಲಿ ರಸಗೊಬ್ಬರ ಅಭಿವೃದ್ಧಿ ನಿಧಿಗೆಂದು ಮೀಸಲಿರಿಸಲಾಗಿದ್ದ 5.31 ಕೋಟಿ ರೂ. ಮೊತ್ತದಲ್ಲಿ ಶೇ. 90ರಷ್ಟು ಹಣವನ್ನು ವಾಹನಗಳಿಗೆ, ಚಾಲಕರ ವೇತನಗಳಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಾಹನಗಳ ನಿರ್ವಹಣೆಗಾಗಿ ವ್ಯಯಿಸಿರುವುದು ಪತ್ತೆಯಾಗಿದೆ.
ಇದರಿಂದಾಗಿ, ನೈಸರ್ಗಿಕ ವಿಕೋಪ ಪರಿಹಾರ, ತರಬೇತಿ ಅಥವಾ ಕೃಷಿ ಉಪಕರಣಗಳಿಗಾಗಿ ರೈತರಿಗೆ ಕೇವಲ 5.10 ಲಕ್ಷ ರೂ. ರಸಗೊಬ್ಬರ ಸಬ್ಸಿಡಿಯನ್ನು ವಿತರಿಸಲಾಗಿದೆ. ಇದು ರೈತರಿಗೆ ನೈಜವಾಗಿ ವಿತರಿಸಬೇಕಿದ್ದ ಮೊತ್ತಕ್ಕಿಂತ ತೀರಾ ಅಲ್ಪ ಮೊತ್ತವಾಗಿದೆ.
ರಾಜ್ಯ ಮಟ್ಟದಲ್ಲೇ 2.77 ಕೋಟಿ ರೂ. ವ್ಯಯಿಸಲಾಗಿದ್ದು, ಈ ಪೈಕಿ 20 ವಾಹನಗಳಿಗಾಗಿಯೇ ಅತ್ಯಧಿಕ 2.25 ಕೋಟಿ ರೂ. ಮೊತ್ತವನ್ನು ವ್ಯಯಿಸಲಾಗಿದೆ. ಆದರೆ, ರಸಗೊಬ್ಬರ ಅಭಿವೃದ್ಧಿ ನಿಧಿಯನ್ನು ರೈತರಿಗೆ ಸಂಕಷ್ಟದ ಸಮಯದಲ್ಲಿ ನೆರವು ಒದಗಿಸಲು, ಪ್ರಾಥಮಿಕ ಕೃಷಿ ಪತ್ತು ಸಹಕಾರ ಸಂಘಗಳ ಬಲವರ್ಧನೆಗೊಳಿಸಲು ಹಾಗೂ ಸಾರಿಗೆ ಆಯವ್ಯಯವಿಲ್ಲದ ರಸಗೊಬ್ಬರ ನಿರ್ವಹಣೆಯ ಸುಧಾರಣೆಗಳಿಗೆ ಮೂಲತಃ ಕಡ್ಡಾಯಗೊಳಿಸಲಾಗಿದೆ ಎಂದು ಮಹಾ ಲೇಖಪಾಲರು ಒತ್ತಿ ಹೇಳಿದ್ದಾರೆ.
ಇದಲ್ಲದೆ, ಮಧ್ಯಪ್ರದೇಶ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಒಕ್ಕೂಟ (Markfed) ಡಿಎಪಿ ಹಾಗೂ ಎಂಒಪಿ ರಸಗೊಬ್ಬರಗಳ ಮೇಲಿನ ಸರಬರಾಜುದಾರರ ವಿನಾಯಿತಿಯನ್ನು ರೈತರಿಗೆ ವರ್ಗಾಯಿಸುವಲ್ಲಿ ವಿಫಲವಾಗಿದೆ ಎಂದು ಮಹಾ ಲೇಖಪಾಲರು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ರೈತರ ಮೇಲೆ ಹೆಚ್ಚುವರಿ 10.50 ಕೋಟಿ ರೂ. ಹೊರೆಯಾಗಿದೆ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
2021-22ನೇ ಸಾಲಿನಲ್ಲಿ ರಸಗೊಬ್ಬರಗಳನ್ನು ಅತ್ಯಧಿಕ ದರದಲ್ಲಿ ಖರೀದಿಸಿ, ರೈತರಿಗೆ ಅಗ್ಗದ ದರದಲ್ಲಿ ಮಾರಾಟ ಮಾಡಿದ್ದರಿಂದ, ಮಧ್ಯಪ್ರದೇಶ ರಾಜ್ಯ ಸಹಕಾರ ಮಹಾ ಒಕ್ಕೂಟಕ್ಕೆ 4.38 ಕೋಟಿ ರೂ. ನಷ್ಟವುಂಟಾಗಿದ್ದು, ಈ ನಷ್ಟವನ್ನು ಅಂತಿಮವಾಗಿ ಸರಕಾರದ ಬೊಕ್ಕಸದಿಂದ ಭರಿಸಬೇಕಾಗಿ ಬಂದಿದೆ ಎಂಬುದರತ್ತಲೂ ಈ ವರದಿ ಬೊಟ್ಟು ಮಾಡಿದೆ.
ಆದರೆ, ಈ ವೆಚ್ಚವನ್ನು ಸಮರ್ಥಿಸಿಕೊಂಡಿರುವ ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಫೆಬ್ರವರಿ 2024ರಲ್ಲಿ ರಸಗೊಬ್ಬರ ವಿತರಣೆಯ ಮೇಲ್ವಿಚಾರಣೆ ನಡೆಸಲು ವಾಹನಗಳು ಅಗತ್ಯವಾಗಿದ್ದವು ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಮಹಾ ಲೇಖಪಾಲರು ಈ ವಾದವನ್ನು ತಳ್ಳಿ ಹಾಕಿದ್ದು, ವಾಹನಗಳ ಮೇಲಿನ ವೆಚ್ಚವು ರಸಗೊಬ್ಬರ ಅಭಿವೃದ್ಧಿ ನಿಧಿಯ ನೈಜ ಆದ್ಯತೆಯನ್ನು ಮರೆಮಾಡಿದೆ ಎಂದು ಹೇಳಿದೆ.