ಉತ್ತರಾಖಂಡ | 28 ಮಂದಿ ಕೇರಳೀಯ ಪ್ರವಾಸಿಗರ ತಂಡ ನಾಪತ್ತೆ
Update: 2025-08-06 21:59 IST
PC : PTI
ಕೊಚ್ಚಿ,ಆ.6: ಉತ್ತರಾಖಂಡದ ಧಾರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಉಂಟಾದ ಭೂಕುಸಿತದ ಬಳಿಕ ಕೇರಳ ಮೂಲದ 28 ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ 20 ಮಂದಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕೇರಳೀಯರಾಗಿದ್ದು, ಉಳಿದ 8 ಮಂದಿ ಕೇರಳದ ವಿವಿಧ ಜಿಲ್ಲೆಗಳವರೆಂದು ತಿಳಿದುಬಂದಿದೆ.
ಈ ತಂಡವು ಉತ್ತರಕಾಶಿಯಿಂದ ಗಂಗೋತ್ರಿಯೆಡೆಗೆ ಬೆಳಗ್ಗೆ 8:30ರ ವೇಳೆಗೆ ತೆರಳುತ್ತಿರುವುದಾಗಿ ತಂಡದಲ್ಲಿದ್ದ ಕುಟುಂಬವೊಂದರ ಸದಸ್ಯ ತನಗೆ ದೂರವಾಣಿಯಲ್ಲಿ ತಿಳಿಸಿದ್ದಾಗಿ, ಬಂಧುವೊಬ್ಬರು ತಿಳಿಸಿದ್ದಾರೆ. ಆ ದಾರಿಯುದ್ದಕ್ಕೂ ಭೂಕುಸಿತಗಳು ಸಂಭವಿಸಿದ್ದು, ಆನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲವೆಂದು ಆಕೆ ಹೇಳಿದ್ದಾರೆ.
ಉತ್ತರಾಖಂಡಕ್ಕೆ ಪ್ರವಾಸಕ್ಕೆ 10 ದಿನಗಳ ಈ ಪ್ರವಾಸವನ್ನು ಆಯೋಜಿಸಿದ್ದ ಹರಿದ್ವಾರ ಮೂಲದ ಟ್ರಾವೆಲ್ ಏಜೆನ್ಸಿಗೂ ತಂಡದ ಬಗ್ಗೆ ಮಾಹಿತಿ ಸಿಕ್ಕಿಲ್ಲವೆಂದು ಅವರು ಹೇಳಿದ್ದಾರೆ.