×
Ad

ದೇವಸ್ಥಾನದಲ್ಲಿ ಜನರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ಹರ್ಯಾಣ ಗೃಹ ಸಚಿವರ ಹೇಳಿಕೆಯನ್ನು ನಿರಾಕರಿಸಿದ ದೇವಾಲಯದ ಅರ್ಚಕ

Update: 2023-08-02 21:32 IST

Photo: ನೂಹ್‌ ದೇವಸ್ಥಾನ| thewire.in

ನೂಹ್: ಸೋಮವಾರ ನೂಹ್‌ನಲ್ಲಿ ನಡೆದ ಕೋಮು ಘರ್ಷಣೆಯ ಸಂದರ್ಭದಲ್ಲಿ ಗಲಭೆಕೋರರು "ದೇವಸ್ಥಾನವೊಂದರಲ್ಲಿ ಸುಮಾರು 3000-4000 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ" ಎಂದು ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ನೀಡಿದ ಹೇಳಿಕೆಯನ್ನು ಅದೇ ದೇವಾಲಯದ ಅರ್ಚಕರು ನಿರಾಕರಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ದಿ ವೈರ್‌ನೊಂದಿಗೆ ಮಾತನಾಡಿದ ನಲ್ಹಾರ್ ಮಹಾದೇವ್ ದೇವಸ್ಥಾನದ ಅರ್ಚಕ ದೀಪಕ್ ಶರ್ಮಾ, ಜನರು ʼಒತ್ತೆಯಾಳುಗಳಾಗಿದ್ದಾರೆʼ ಎಂದು ವಿಜ್ ಹೇಳಿದ್ದಾರೆ, ದೇವಾಲಯದಲ್ಲಿ ಸಾಮಾನ್ಯವಾಗಿ (ಶಿವ ಭಕ್ತರಿಗೆ ಪವಿತ್ರವೆಂದು ಪರಿಗಣಿಸಲಾದ) ಸಾವನ್ ಮಾಸದಲ್ಲಿ ಯಾತ್ರಿಕರ ಹರಿವು ಅಧಿಕವಾಗಿರುತ್ತದೆ. ಸೋಮವಾರ (ಇದು ಕೂಡಾ ಶಿವಭಕ್ತರಿಗೆ ವಿಶೇಷ ದಿನ ಎಂದು ಪರಿಗಣಿಲಾಗಿದೆ) ಶೋಭಾ ಯಾತ್ರೆಯ ಕಾರಣ ಭಕ್ತರ ಸಂಖ್ಯೆ ತುಂಬಾ ಹೆಚ್ಚಿತ್ತು. ಅವರು ಶೋಭಾ ಯಾತ್ರೆಯ ಸಮಯದಲ್ಲಿ (ತಮ್ಮ ಪ್ರಾರ್ಥನೆ ಸಲ್ಲಿಸಿದ ನಂತರ) ಒಳಗೆ ಬಂದು ಹೋಗುತ್ತಿದ್ದರು ಎಂದು ಹೇಳಿದ್ದಾರೆ.

ಭಕ್ತರನ್ನು “ಒತ್ತೆಯಾಳಾಗಿ ಇರಿಸಲಾಗಿದೆಯೇ”ಎಂದು ಶರ್ಮಾ ಅವರ ಬಳಿ ಕೇಳಿದಾಗ, ಉತ್ತರಿಸಿದ ಅವರು, “ಇವರನ್ನು ಒತ್ತೆಯಾಳಾಗಿ ಇಡುವುದು ಹೇಗೆ? ಅವರು ಪರಮಾತ್ಮನ ಆಶ್ರಯದಲ್ಲಿದ್ದರು. ಆದರೆ ಹೊರಗಿನ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಅವರಿಗೆ ಇದ್ದಕ್ಕಿದ್ದಂತೆ ತಿಳಿಯಿತು. ಹೊರಗಿನ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಜನರು (ದೇವಾಲಯದ) ಒಳಗೆ ಸಿಕ್ಕಿಹಾಕಿಕೊಂಡರು” ಎಂದು ತಿಳಿಸಿದರು.

ಘರ್ಷಣೆಗಳು ಇನ್ನೂ ನಿಯಂತ್ರಣಕ್ಕೆ ಬರದ ಸಮಯದಲ್ಲಿ ರಾಜ್ಯ ಗೃಹ ಸಚಿವರ ವಿವಾದಾತ್ಮಕ ಹೇಳಿಕೆಯು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತ್ತು.

ನಲ್ಹಾರ್ ಮಹಾದೇವ ದೇವಾಲಯವು ನೂಹ್ ನ ಮುಖ್ಯ ಪಟ್ಟಣದಿಂದ ದೂರದಲ್ಲಿದೆ. ಬೆಟ್ಟಗಳಿಂದ ಆವೃತವಾಗಿರುವ ಈ ದೇವಾಲಯವು ಪಾಂಡವರ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ.

ಸೋಮವಾರ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ಮಂಡಲ್ ಜಲಾಭಿಷೇಕ ಯಾತ್ರೆ ಎಂಬ ಮೆರವಣಿಗೆಯನ್ನು ನೂಹ್‌ ಪಟ್ಟಣಕ್ಕೆ ಬರದಂತೆ ತಡೆದ ಬಳಿಕ ಘರ್ಷಣೆ ಭುಗಿಲೆದ್ದಿದೆ. ರಾಜಸ್ಥಾನದ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮೋನು ಮನೇಸರ್‌ ನೂಹ್‌ಗೆ ಆಗಮಿಸುತ್ತಿದ್ದಾರೆ, ತಾಕತ್ತಿದ್ದರೆ ತಡೆಯಿರಿ ಎಂಬಂತಹ ಧ್ವೇಷಪೂರಿತ ವಿಡಿಯೋಗಳು ಹರಿದಾಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News