‘ಜೈ ಮಾತಾ ದಿ’ ಸ್ಟಿಕರ್ ಅಂಟಿಸಿಕೊಂಡಿದ್ದ ವಾಹನಕ್ಕೆ ದಂಡ ವಿಧಿಸಿದ ಸಂಚಾರಿ ಪೊಲೀಸ್
Photo: indiatoday.in
ಘಾಝಿಯಾಬಾದ್ (ಉತ್ತರ ಪ್ರದೇಶ): ವಾಹನವೊಂದರ ಮೇಲೆ ‘ಜೈ ಮಾತಾ ದಿ’ ಸ್ಟಿಕರ್ ಅಂಟಿಸಿಕೊಂಡಿದ್ದ ಚಾಲಕನೊಬ್ಬನಿಗೆ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ದಂಡ ವಿಧಿಸಿರುವ ಘಟನೆ ಸೋಮವಾರ ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿ ನಡೆದಿದೆ. ದಂಡದ ಚಲನ್ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಹಿಂದೂ ಪರ ಸಂಘಟನೆಯಾದ ಹಿಂದೂ ರಕ್ಷಾ ದಳದ ಕಾರ್ಯಕರ್ತರು, ದಂಡ ವಿಧಿಸಿದ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು. ಈ ಮಾತಿನ ಚಕಮಕಿಯ ನಂತರ ಘಟನೆಯ ವೀಡಿಯೊ ವೈರಲ್ ಆಗಿದೆ ಎಂದು indiatoday.in ವರದಿ ಮಾಡಿದೆ.
ಆ ವೀಡಿಯೊದಲ್ಲಿ ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷ ಪಿಂಕಿ ಚೌಧರಿ ತಮ್ಮ ಸುತ್ತ ಸಂಘಟನೆಯ ಹಲವಾರು ಸದಸ್ಯರನ್ನು ಇಟ್ಟುಕೊಂಡು ದಂಡ ವಿಧಿಸಿದ ಸಂಚಾರಿ ಪೊಲೀಸ್ ಅಧಿಕಾರಿಯೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಸೆರೆಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸುವಂತೆ ಚೌಧರಿ ಸವಾಲು ಹಾಕುತ್ತಿರುವುದೂ ವೀಡಿಯೊದಲ್ಲಿ ಸೆರೆಯಾಗಿದೆ. ಘಟನೆಯನ್ನು ಸೆರೆ ಹಿಡಿಯಲು ಇಟ್ಟುಕೊಂಡಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್ ಫೋನ್ ಅನ್ನು ಕಸಿಯಲು ಚೌಧರಿ ಯತ್ನಿಸಿರುವುದೂ ವೀಡಿಯೊದಲ್ಲಿ ದಾಖಲಾಗಿದೆ.
ವಾಹನಗಳ ಮೇಲೆ ಧಾರ್ಮಿಕ ಅಥವಾ ನಿರ್ದಿಷ್ಟ ಜಾತಿ ಸೂಚಿಸುವ ಸ್ಟಿಕರ್ ಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿರುವ ಮೋಟರ್ ವಾಹನ ಕಾಯ್ದೆಯನ್ವಯ ದಂಡವನ್ನು ವಿಧಿಸಲಾಗಿದೆ.
ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪಿಂಕಿ ಚೌಧರಿ ಹಾಗೂ ಒಂದು ಡಜನ್ ಗೂ ಹೆಚ್ಚು ಅಪರಿಚಿತ ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 146 (ಒತ್ತಡದ ಬಳಕೆ ಅಥವಾ ಹಿಂಸಾಚಾರ), 148 (ಗಲಭೆ), 322 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 353 (ಸಾರ್ವಜನಿಕ ಸೇವಕನಿಗೆ ಅಡ್ಡಿ ಪಡಿಸುವುದು), 504 (ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.