ಬಿಹಾರ | ಕರಡು ಮತದಾರರ ಪಟ್ಟಿ ಬಿಡುಗಡೆಯ ಬಳಿಕ ಸುಮಾರು 6 ಸಾವಿರಕ್ಕೂ ಹೆಚ್ಚು ದೂರು; ಭಾರತೀಯ ಚುನಾವಣಾ ಆಯೋಗ
“ಪಕ್ಷಗಳಿಂದ ಯಾವುದೇ ದೂರು ಬಂದಿಲ್ಲ”
PC : @ECISVEEP
ಹೊಸದಿಲ್ಲಿ: ಬಿಹಾರ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿ ನಿಖರವಾಗಿ ಒಂದು ವಾರ ಕಳೆದಿದ್ದು, 6,257 ಮತದಾರರು ಈ ಕುರಿತು ಆಕ್ಷೇಪ ಸಲ್ಲಿಸಿದ್ದರೂ, ರಾಜಕೀಯ ಪಕ್ಷಗಳು ಇದುವರೆಗೆ ಯಾವುದೇ ದೂರು ಸಲ್ಲಿಸಿಲ್ಲ ಎಂದು ಶುಕ್ರವಾರ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.
ಇದರೊಂದಿಗೆ, 36,060 ಅರ್ಜಿಗಳು ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗಲು ಸಲ್ಲಿಕೆಯಾಗಿವೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಭಾರತೀಯ ಚುನಾವಣಾ ಆಯೋಗ ಹೇಳಿದೆ.
ಮತದಾರರು ಮೃತಪಟ್ಟಿದ್ದಾರೆ, ವಲಸೆ ಹೋಗಿದ್ದಾರೆ ಅಥವಾ ಎರಡು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದ ಚುನಾವಣಾ ಆಯೋಗ, ಈ ವರ್ಷದ ಆರಂಭದಲ್ಲಿ ಸಿದ್ಧಪಡಿಸಲಾಗಿದ್ದ ಮತದಾರರ ಪಟ್ಟಿಗೆ ಹೋಲಿಸಿದರೆ, ಸುಮಾರು 65 ಲಕ್ಷ ಮಂದಿ ಮತದಾರರನ್ನು ಕಳೆದ ವಾರ ಬಿಡುಗಡೆ ಮಾಡಲಾದ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ.
ಕರಡು ಮತದಾರರ ಪಟ್ಟಿ ಬಿಡುಗಡೆಯಾದಂದಿನಿಂದ ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಮತದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ಅಥವಾ ತೆಗೆದು ಹಾಕುವಂತೆ ಯಾವುದೇ ದೂರು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಳೆದ ವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೆ ಅಥವಾ ಇಲ್ಲವೆ ಎಂಬುದನ್ನು ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ತಮ್ಮ ಹೆಸರು, ವಯಸ್ಸು, ಜಿಲ್ಲೆ ಅಥವಾ ಹಾಲಿ ಎಪಿಕ್ ಸಂಖ್ಯೆ ಸೇರಿದಂತೆ ವಿವಿಧ ಆಯ್ಕೆಗಳನ್ನು ನಮೂದಿಸುವ ಮೂಲಕ ಮತದಾರರು ಪರಿಶೀಲಿಸಿಕೊಳ್ಳುವ ಅವಕಾಶವನ್ನು ನೀಡಿದೆ.
ಮತದಾರರ ಸಹಾಯವಾಣಿ ಆ್ಯಪ್ ಅಥವಾ ಮೊಬೈಲ್ ಸಂಖ್ಯೆ 7738299899 ಸಂಖ್ಯೆಗೆ ತಮ್ಮ ಎಪಿಕ್ ಸಂಖ್ಯೆಯನ್ನು ವಾಟ್ಸ್ ಆ್ಯಪ್ ಮಾಡುವ ಮೂಲಕವೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೆ ಅಥವಾ ಇಲ್ಲವೆ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಆಯೋಗವು ತಿಳಿಸಿದೆ.