×
Ad

ಪ್ರಿಯಕರನೊಂದಿಗೆ ಸೇರಿಕೊಂಡು ಕಟ್ಟಿಕೊಂಡಿದ್ದ ಗಂಡನನ್ನು ಕೊಂದ ಹರ್ಯಾಣದ ಯೂಟ್ಯೂಬರ್!

Update: 2025-04-16 21:26 IST

PC : indiatoday.in

ಚಂಡಿಗಡ: ಭಿವಾನಿ ಕೊಲೆ ಪ್ರಕರಣದಲ್ಲಿ ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯಾವಳಿಯೊಂದು ಬೆಳಕಿಗೆ ಬಂದಿದ್ದು, ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನ ಶವವನ್ನು ಚರಂಡಿಗೆ ಎಸೆಯುವ ಮುನ್ನ ಅದನ್ನು ಬೈಕ್‌ ನಲ್ಲಿ ಸಾಗಿಸಿದ್ದನ್ನು ಅದು ತೋರಿಸಿದೆ.

ರೇವಾರಿ ನಿವಾಸಿ ಯೂಟ್ಯೂಬರ್ ರವೀನಾ(28) ಮತ್ತು ಆಕೆಯ ಪ್ರಿಯಕರ ಕಂಟೆಂಟ್ ಕ್ರಿಯೇಟರ್ ಸುರೇಶ್ ಕೊಲೆ ಆರೋಪಿಗಳಾಗಿದ್ದಾರೆ. ಮಾ.25ರಂದು ಭಿವಾನಿಯ ಮನೆಯಲ್ಲಿ ಅವರಿಬ್ಬರೂ ಆಪ್ತ ಕ್ಷಣಗಳನ್ನು ಅನುಭವಿಸುತ್ತಿದ್ದಾಗ ರವೀನಾಳ ಪತಿ ಪ್ರವೀಣ್(32) ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ವೇಳೆ ವಾಗ್ವಾದ ನಡೆದು ಇಬ್ಬರೂ ಸೇರಿ ಪ್ರವೀಣ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಬಟ್ಟೆಯಲ್ಲಿ ಸುತ್ತಿ ಬೈಕ್‌ನಲ್ಲಿ ಸಾಗಿಸಿ ನಗರದ ಹೊರವಲಯದ ರಸ್ತೆಬದಿಯ ಚರಂಡಿಯಲ್ಲಿ ಎಸೆದಿದ್ದರು.

ಪ್ರವೀಣ್ ನಾಪತ್ತೆಯ ಬಳಿಕ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೋಲೀಸರು ದಂಪತಿಯ ಮನೆ ಸುತ್ತಲಿನ ಮತ್ತು ಶವ ಪತ್ತೆಯಾಗಿದ್ದ ಪ್ರದೇಶಗಳಲ್ಲಿಯ ನೂರಾರು ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದಾಗ ಈ ಆಘಾತಕಾರಿ ದೃಶ್ಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ತುಣುಕು ಆರೋಪಿಗಳು ತಡರಾತ್ರಿ ಶವವನ್ನು ಬೈಕ್‌ ನಲ್ಲಿ ತಮ್ಮಿಬ್ಬರ ನಡುವೆ ಇಟ್ಟುಕೊಂಡು ಸಾಗಿಸುತ್ತಿದ್ದನ್ನು ತೋರಿಸಿದೆ.

ಪ್ರವೀಣ್‌ ಕೊಲೆಯನ್ನು ರವೀನಾ ಒಪ್ಪಿಕೊಂಡಿದ್ದು, ಆಕೆಯನ್ನು ಪೋಲಿಸರು ಬಂಧಿಸಿದ್ದಾರೆ. ಸುರೇಶ್‌ ಈಗಲೂ ತಲೆ ಮರೆಸಿಕೊಂಡಿದ್ದಾನೆ.

ರೇವಾರಿಯ ಜೂಡಿ ಗ್ರಾಮದ ನಿವಾಸಿ ರವೀನಾ ಮತ್ತು ಭಿವಾನಿಯ ಗುಜ್ರೋಂ ಕಿ ಧಾನಿ ನಿವಾಸಿ ಪ್ರವೀಣ್‌ ಮದುವೆ 2017ರಲ್ಲಿ ನಡೆದಿದ್ದು,ದಂಪತಿಗೆ ಆರರ ಹರೆಯದ ಮಗನಿದ್ದಾನೆ. ಕಳೆದ ಕೆಲವು ವರ್ಷಗಳಿಂದ ರವೀನಾಳ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮತ್ತು ಸುರೇಶ್‌ ಜೊತೆ ಹೆಚ್ಚುತ್ತಿದ್ದ ಸಲಿಗೆಯಿಂದಾಗಿ ಅವರ ವೈವಾಹಿಕ ಸಂಬಂಧ ಹಳಸಿತ್ತು ಎಂದು ಪೋಲಿಸರು ತಿಳಿಸಿದರು.

ರವೀನಾ ಹಿಸಾರ್‌ ನ ಪ್ರೇಮನಗರ ಗ್ರಾಮದ ನಿವಾಸಿ ಯೂಟ್ಯೂಬರ್ ಸುರೇಶ್‌ ನನ್ನು 18 ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿದ್ದಳು.

ಚಾಲಕ ವೃತ್ತಿಯಲ್ಲಿದ್ದ ಪ್ರವೀಣ್‌ ರವೀನಾ ಮತ್ತು ಸುರೇಶ್‌ ಗೆಳೆತನವನ್ನು ಆಕ್ಷೇಪಿಸಿದ್ದ. ನಾಪತ್ತೆಯಾದ ಮೂರು ದಿನಗಳ ಬಳಿಕ ಆತನ ಕೊಳೆತ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News