×
Ad

ಸೋನಮ್ ವಾಂಗ್ಚುಕ್ ಬಂಧನ | ರಾಹುಲ್ ಗಾಂಧಿಯನ್ನು ಬಿಜೆಪಿ ಏಜೆಂಟ್ ಎಂದ ಆಮ್ ಆದ್ಮಿ ಪಕ್ಷ

ಆರೆಸ್ಸೆಸ್ ಅಡಿಪಾಯ ಹಾಕಿದ ಪಕ್ಷ ನಿಮ್ಮದು ಎಂದು ಕಾಂಗ್ರೆಸ್ ತಿರುಗೇಟು

Update: 2025-09-28 07:52 IST

PC | indiatimes

ಹೊಸದಿಲ್ಲಿ: ಚಳವಳಿಗಾರ ಸೋನಮ್ ವಾಂಗ್ಚುಕ್ ಅವರ ಬಂಧನದ ವಿಚಾರದಲ್ಲಿ ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಮಧ್ಯೆ ವಾಕ್ಸಮರ ನಡೆದಿದೆ. ಬಂಧನದ ಬಗ್ಗೆ ಕಾಂಗ್ರೆಸ್ ಏಕೆ ಮೌನ ವಹಿಸಿದೆ ಎಂದು ಆಪ್ ಪ್ರಶ್ನಿಸಿದ್ದು, ಆಮ್ ಆದ್ಮಿ ಪಕ್ಷ ವಿನಾಶದ ಅಂಚಿನಲ್ಲಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

"ಭಾರತದ ಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರನ್ನು ಮೋದಿಯವರ ಸರ್ವಾಧಿಕಾರಿ ಸರ್ಕಾರ ದೇಶದ್ರೋಹದ ಸುಳ್ಳು ಆರೋಪದಲ್ಲಿ ಬಂಧಿಸಿದೆ ಮತ್ತು ದೇಶದ ವಿರೋಧ ಪಕ್ಷದ ನಾಯಕ ಎನ್ನಲಾದವರು ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ" ಎಂದು ಆಮ್ ಆದ್ಮಿ ಪಕ್ಷ ಎಕ್ಸ್ ಹ್ಯಾಂಡಲ್ ಪೋಸ್ಟ್ ನಲ್ಲಿ ಕೆಣಕಿದೆ.

"ಆಪರೇಷನ್ ಸಿಂಧೂರದಲ್ಲಿ ನಮ್ಮ ಎಷ್ಟು ಹೆಲಿಕಾಪ್ಟರ್ ಗಳು ನಾಶವಾಗಿವೆ ಎಂದು ಕೇಳುವ ರಾಹುಲ್‍ಗಾಂಧಿ, ಸೋನಮ್ ವಾಂಗ್ಚುಕ್ ವಿಚಾರದಲ್ಲಿ ಏಕೆ ಮೌನ ವಹಿಸಿದ್ದಾರೆ? ರಾಹುಲ್‍ಗಾಂಧಿ ಬಿಜೆಪಿ ಏಜೆಂಟ್ ಆಗಿದ್ದಾರೆಯೇ?" ಎಂದು ಪ್ರಶ್ನಿಸಿದೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರಿನೇತ್,"ಅರವಿಂದ್ ಕೇಜ್ರಿವಾಲ್ ಅವರೇ, ನಿಮ್ಮ ಪಕ್ಷ ವಿನಾಶದ ಅಂಚಿನಲ್ಲಿದೆ. ಏಕೆಂದು ನಿಮಗೆ ಗೊತ್ತೇ? ನಿಮ್ಮ ಪಕ್ಷಕ್ಕೆ ತೆರೆಮರೆಯಲ್ಲಿ ಅಡಿಪಾಯ ಹಾಕಿದ್ದು ಆರೆಸ್ಸೆಸ್. ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದಿರಿ. ನಿಮ್ಮನ್ನು ಸೃಷ್ಟಿಸಿದ ಸಂಸ್ಥೆಯೇ ಇದೀಗ ನಿಮ್ಮನ್ನು ನುಂಗಿಹಾಕಿದೆ" ಎಂದು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News