×
Ad

ದೇಶದಲ್ಲಿ ದಿನಕ್ಕೆ 485 ಮಂದಿ ಅಪಘಾತದಿಂದ ಮೃತ್ಯು!

Update: 2025-12-05 07:41 IST

PC: screengrab/x.com/sansad_tv

ಹೊಸದಿಲ್ಲಿ: ದೇಶದಲ್ಲಿ ಸರಾಸರಿ ಪ್ರತಿದಿನ 485 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. 2024ರಲ್ಲಿ ಒಟ್ಟು 1.77 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದೆ.

ದೇಶದ ಒಟ್ಟು ರಸ್ತೆ ಜಾಲದಲ್ಲಿ ಶೇಕಡ 2ರಷ್ಟು ಪಾಲು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 54,443 ಸಾವುಗಳು ಸಂಭವಿಸಿದ್ದು, ಇದು ಒಟ್ಟು ಜೀವಹಾನಿಯ ಶೇಖಡ 31ರಷ್ಟಾಗಿದೆ. ಆದರೆ ಇದು ಕಳೆದ ನಾಲ್ಕು ವರ್ಷಗಳಲ್ಲಿ ಕನಿಷ್ಠ ಎಂದು ಸಚಿವಾಲಯ ವಿವರಿಸಿದೆ.

2023ಕ್ಕೆ ಹೋಲಿಸಿದರೆ ಒಟ್ಟು ಸಾವಿನ ಸಂಖ್ಯೆ ಶೇಕಡ 2.3ರಷ್ಟ ಹೆಚ್ಚಳವಾಗಿದೆ. ಹಿಂದಿನ ವರ್ಷ 1.73 ಲಕ್ಷ ಮಂದಿ ಅಪಘಾತಗಳಲ್ಲಿ ಮೃತಪಟ್ಟಿದ್ದರು.

"ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ರಸ್ತೆ ಅಪಘಾತಗಳಿಂದ ಆಗಿರುವ ಸಾವ 2024ರಲ್ಲಿ 1,77,177 ಆಗಿದೆ. ಇದರಲ್ಲಿ ಬಂಗಾಳದಿಂದ ಪಡೆದ ಅಪಘಾತಕ್ಕೆ ಸಂಬಂಧಿಸಿದ ವಿವರವಾದ ಎಲೆಕ್ಟ್ರಾನಿಕ್ ವರದಿಯ ಅಂಕಿ ಅಂಶಗಳೂ ಸೇರಿವೆ" ಎಂದು ಡಿಎಂಕೆಯ ಎ.ರಾಜಾ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಸಂಖ್ಯೆ ಮತ್ತು ಮರಣ ಸಂಖ್ಯೆ ಕಡಿಮೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 2022ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1.52 ಲಕ್ಷ ಅಪಘಾತಗಳು ಸಂಭವಿಸಿದ್ದರೆ ಕಳೆದ ವರ್ಷ ಇದು 1.29 ಲಕ್ಷಕ್ಕೆ ಇಳಿದಿದೆ. ಅಂತೆಯೇ 2021ರಲ್ಲಿ 56007 ಇದ್ದ ಸಾವಿನ ಸಂಖ್ಯೆ 54 ಸಾವಿರಕ್ಕೆ ಇಳಿದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News