"ಅವರು ನನ್ನ ಕುತ್ತಿಗೆ ಸೀಳಿದರೂ ಪಕ್ಷಾಂತರ ಮಾಡುವುದಿಲ್ಲ": ಬಿಜೆಪಿಗೆ ಸೇರುವ ವದಂತಿಗೆ ಅಭಿಷೇಕ್ ಬ್ಯಾನರ್ಜಿ ಸ್ಪಷ್ಟನೆ
ಅಭಿಷೇಕ್ ಬ್ಯಾನರ್ಜಿ | PC : PTI
ಕೋಲ್ಕತ್ತಾ: “ಅವರು ನನ್ನ ಕುತ್ತಿಗೆ ಸೀಳಿದರೂ ಬಿಜೆಪಿಗೆ ಪಕ್ಷಾಂತರ ಮಾಡಲಾರೆ” ಎಂದು ಗುರುವಾರ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಕೂಡಾ ಆಗಿರುವ ಅಭಿಷೇಕ್ ಬ್ಯಾನರ್ಜಿ ಬಿಜೆಪಿಗೆ ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಅವರಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.
ಕೋಲ್ಕತ್ತಾದಲ್ಲಿ ಆಯೋಜನೆಗೊಂಡಿದ್ದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಭಿಷೇಕ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಜನರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ವಿಶ್ವಾಸ ದ್ರೋಹಿಯಲ್ಲ. ಯಾರು ನಾನು ಬಿಜೆಪಿಗೆ ಪಕ್ಷಾಂತರ ಮಾಡಲಿದ್ದೇನೆ ಎಂದು ಹೇಳುತ್ತಿದ್ದಾರೊ, ಅಂಥವರು ನನ್ನ ಕುತ್ತಿಗೆ ಸೀಳಿದರೂ, ನನ್ನ ಸೀಳಿದ ಗಂಟಲಿನಿಂದ ನಾನು ‘ಮಮತಾ ಬ್ಯಾನರ್ಜಿಗೆ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತೇನೆ” ಎಂದು ಘೋಷಿಸಿದ್ದಾರೆ.
ಇಂತಹ ವದಂತಿಗಳನ್ನು ಯಾರು ಹಬ್ಬಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ ಅವರು, ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ನಾಯಕರಾದ ಮುಕುಲ್ ರಾಯ್ ಹಾಗೂ ಸುವೇಂದು ಅಧಿಕಾರಿಯತ್ತ ಬೊಟ್ಟು ಮಾಡಿದರು.
“ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೂ ಮುನ್ನ ಅವರಿಗೆ ಪಟ್ಟಭದ್ರ ಹಿತಾಸಕ್ತಿ ಇದೆ” ಎಂದು ಆರೋಪಿಸಿದ ಅಭಿಷೇಕ್ ಬ್ಯಾನರ್ಜಿ, ಮುಕುಲ್ ರಾಯ್ ಹಾಗೂ ಸುವೇಂದು ಅಧಿಕಾರಿ ವಿಶ್ವಾಸ ದ್ರೋಹಿಗಳಾಗಿದ್ದು, ನಾನು ಮತ್ತೊಮ್ಮೆ ಅವರನ್ನು ಅದೇ ರೀತಿಯಲ್ಲಿ ಬಯಲು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಪಕ್ಷವನ್ನು ಇದೇ ರೀತಿ ಬೆಂಬಲಿಸುವುದನ್ನು ಮುಂದುವರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಅವರು, “ನೀವು ನಮ್ಮೊಂದಿಗೆ ಇರುವವರೆಗೂ ಬಿಜೆಪಿಯ ಚಕ್ರವ್ಯೂಹ ಭೇದಿಸುವುದನ್ನು ನಾವು ಮುಂದುವರಿಸಲಿದ್ದೇವೆ” ಎಂದೂ ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳು ಹಾಗೂ ಬಿಜೆಪಿ ವಿರುದ್ಧದ ದಾಳಿಯಿಂದ ಹಿಂದೆ ಸರಿದಿದ್ದ ಅಭಿಷೇಕ್ ಬ್ಯಾನರ್ಜಿ, ತಮ್ಮ ಸ್ವಕ್ಷೇತ್ರವಾದ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ನಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರತ್ತ ಗಮನ ಹರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಇಂದಿನ ಹೇಳಿಕೆ ಮಹತ್ವ ಪಡೆದುಕೊಂಡಿದೆ.