ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಿ : ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್
ಸರ್ವಾನ್ ಸಿಂಗ್ ಪಂಧೇರ್ | Photo : PTI
ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಖಾತರಿ ಹಾಗೂ ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಅವರು ಮಂಗಳವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಬೇಳೆಕಾಳು, ಮೆಕ್ಕೆ ಜೋಳ ಹಾಗೂ ಹತ್ತಿಯನ್ನು ಸರಕಾರ 5 ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವ ಕೇಂದ್ರ ಸರಕಾರದ ಪ್ರಸ್ತಾವವನ್ನು ತಿರಸ್ಕರಿಸಿ ರೈತ ನಾಯಕರು ‘ದಿಲ್ಲಿ ಚಲೋ’ ಚಳವಳಿಯಲ್ಲಿ ಭಾಗವಹಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣ ನಡುವಿನ ಶಂಭು ಗಡಿ ಕೇಂದ್ರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಂಧೇರ್, ರೈತರಿಗೆ ಮೂರು ಮುಖ್ಯ ಬೇಡಿಕೆಗಳಿವೆ. ಅವುಗಳೆಂದರೆ, ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿದ ಸಿ2 ಪ್ಲಸ್ 50 ಶೇಕಡ ಫಾರ್ಮುಲಾ ಅನುಷ್ಠಾನ ಹಾಗೂ ಸಾಲಮನ್ನಾ ಎಂದರು.
ಪ್ರತಿಭಟನೆ ಸಂದರ್ಭ ಇಬ್ಬರು ರೈತರು ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಪಂಧೇರ್, ಈ ಕುರಿತಂತೆ ಪಂಜಾಬ್ ಸರಕಾರ ನೀತಿ ಘೋಷಿಸಬೇಕು ಎಂದು ಹೇಳಿದರು. ಅಲ್ಲದೆ, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಉದ್ಯೋಗ ಹಾಗೂ ಪರಿಹಾರ ನೀಡುವಂತೆ ಕೋರಿದರು.
ಪಂಜಾಬಿನ ನಿರ್ಧಿಷ್ಟ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಕುರಿತು ಅವರು, ಈ ಕುರಿತಂತೆ ರಾಜ್ಯ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.
ದಿಲ್ಲಿ ರ್ಯಾ ಲಿಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಪಂಧೇರ್, ‘‘ನಾವು ಫೆಬ್ರವರಿ 21ರಂದು 11 ಗಂಟೆಗೆ ದಿಲ್ಲಿಯತ್ತ ಮತ್ತೆ ಶಾಂತಿಯುತವಾಗಿ ರ್ಯಾ ಲಿ ನಡೆಸಲಿದ್ದೇವೆ’’ ಎಂದಿದ್ದಾರೆ.