ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಗೆ ಜಾಮೀನು ಮಂಜೂರು
Update: 2025-01-03 18:17 IST
Photo | PTI
ಹೈದರಾಬಾದ್: ಪುಷ್ಪ- 2 ಚಲನ ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಗೆ ಹೈದರಾಬಾದ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಹೈದರಾಬಾದ್ ನ್ಯಾಯಾಲಯ ಅಲ್ಲು ಅರ್ಜುನ್ ಗೆ ಜಾಮೀನು ಮಂಜೂರು ಮಾಡುವ ವೇಳೆ ತಲಾ 50,000 ರೂ.ಗಳ ಎರಡು ಶ್ಯೂರಿಟಿಗಳನ್ನು ಒದಗಿಸುವಂತೆ ಷರತ್ತನ್ನು ವಿಧಿಸಿದೆ.
ಡಿಸೆಂಬರ್ 4ರಂದು ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾಗಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೂಲಕ ಬಿಡುಗಡೆಯಾಗಿದ್ದರು.