ಯುಎಇಯಲ್ಲಿ ಬಂಧನದಲ್ಲಿರುವ ನಟಿ ಸೆಲಿನಾ ಜೇಟ್ಲಿ ಸೋದರನಿಗೆ ಕಾನೂನು ನೆರವು ಒದಗಿಸಿ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನಿರ್ದೇಶನ
Photo credit: instagram
ಹೊಸದಿಲ್ಲಿ: ‘ರಾಷ್ಟ್ರೀಯ ಭದ್ರತಾ ಪ್ರಕರಣ’ಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಸೆಪ್ಟಂಬರ್‌ನಿಂದ ಯುಎಇಯಲ್ಲಿ ಬಂಧನದಲ್ಲಿರುವ ಮೇಜರ್(ನಿವೃತ್ತ) ವಿಕ್ರಾಂತ್ ಕುಮಾರ ಜೇಟ್ಲಿ ಅವರಿಗೆ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯವನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ವಿಕ್ರಾಂತ್ ಬಾಲಿವುಡ್ ನಟಿ ಸೆಲಿನಾ ಜೇಟ್ಲಿಯವರ ಸೋದರನಾಗಿದ್ದಾರೆ.
ಸೆಲಿನಾ ಸಲ್ಲಿಸಿರುವ ಅರ್ಜಿಗೆ ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೇಳಿದ ನ್ಯಾ.ಸಚಿನ ದತ್ತಾ ಅವರು, ಸೆಲಿನಾ ಮತ್ತು ಅವರ ಸೋದರನ ನಡುವೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವಂತೆಯೂ ಆದೇಶಿಸಿದರು. ತಾನು ವಿಕ್ರಾಂತ್ ಅವರ ‘ಬದುಕಿರುವ ಏಕೈಕ ನಿಕಟ ರಕ್ತಸಂಬಂಧಿಯಾಗಿದ್ದೇನೆ’ ಎಂದು ಸೆಲಿನಾ ಅರ್ಜಿಯಲ್ಲಿ ಎತ್ತಿ ತೋರಿಸಿದ್ದಾರೆ.
ಯುಎಇ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಕಗೊಳಿಸುವಂತೆಯೂ ನ್ಯಾಯಾಲಯವು ನಿರ್ದೇಶನ ನೀಡಿದೆ.
ಸೆ.6, 2024ರಂದು ಯುಎಇಯಲ್ಲಿ ತನ್ನ ಸೋದರನನ್ನು ಅಕ್ರಮವಾಗಿ ಅಪಹರಿಸಲಾಗಿದೆ ಮತ್ತು ಬಂಧನದಲ್ಲಿಡಲಾಗಿದೆ ಎಂದು ಸೆಲಿನಾ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ಭಾರತೀಯ ಅಧಿಕಾರಿಗಳನ್ನು ಪದೇ ಪದೇ ವಿನಂತಿಸಿಕೊಂಡಿದ್ದರೂ,ಅಹವಾಲುಗಳನ್ನು ಸಲ್ಲಿಸಿದ್ದರೂ ತನ್ನ ಸೋದರನ ಯೋಗಕ್ಷೇಮ ಮತ್ತು ಕಾನೂನು ಸ್ಥಾನಮಾನ ಕುರಿತು ಯಾವುದೇ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ತಾನು ವಿಫಲಗೊಂಡಿದ್ದೇನೆ ಎಂದು ಸೆಲಿನಾ ಪ್ರತಿಪಾದಿಸಿದ್ದಾರೆ.
ಯುಎಇಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಕ್ರಾಂತ್‌ರನ್ನು ಬಂಧಿಸಲಾಗಿದೆ. ಭಾರತೀಯ ಅಧಿಕಾರಿಗಳು ಅವರ ಪತ್ನಿಯೊಂದಿಗೆ ಪತ್ರ ವ್ಯವಹಾರವನ್ನು ನಡೆಸುತ್ತಿದ್ದಾರೆ ಮತ್ತು ದೂತಾವಾಸ ಸಂಪರ್ಕವನ್ನು ವಿಕ್ರಾಂತ್‌ಗೆ ಲಭ್ಯವಾಗಿಸಲಾಗಿದೆ ಎಂದು ಸೋಮವಾರ ವಿಚಾರಣೆ ವೇಳೆ ಕೇಂದ್ರದ ಪರ ವಕೀಲರು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ವಿಕ್ರಾಂತ್ ತನ್ನ ಪತ್ನಿಯಿಂದ ದೂರವಾಗಿದ್ದಾರೆ ಎಂದು ಸೆಲಿನಾ ಪರ ವಕೀಲರು ಬೆಟ್ಟು ಮಾಡಿದರು.
2016ರಿಂದ ಯುಎಇಯಲ್ಲಿ ವಾಸವಾಗಿರುವ ವಿಕ್ರಾಂತ್ ವ್ಯಾಪಾರ,ಸಲಹಾ ಮತ್ತು ಅಪಾಯ ನಿರ್ವಹಣೆ ಸೇವೆಗಳಲ್ಲಿ ತೊಡಗಿಕೊಂಡಿರುವ ಮಟಿಟಿ ಗ್ರೂಪ್‌ನ ಉದ್ಯೋಗಿಯಾಗಿದ್ದರು.
ಮುಂದಿನ ವಿಚಾರಣೆ ಡಿ.6ರಂದು ನಡೆಯಲಿದೆ.