ಅಮೆರಿಕದ ಸಮನ್ಸ್ ವರದಿಗಳ ನಡುವೆ ನೆಲ ಕಚ್ಚಿದ ಅದಾನಿ ಗ್ರೂಪ್ ಶೇರುಗಳು: ಶೇ.14.5ರವರೆಗೆ ಕುಸಿತ
ಅದಾನಿ ಗ್ರೂಪ್ ಶೇರು | Photo Credit : PTI
ಹೊಸದಿಲ್ಲಿ,ಜ.23: ವಂಚನೆ ಆರೋಪ ಮತ್ತು 265 ಶತಕೋಟಿ ಡಾಲರ್ ಲಂಚ ಪ್ರಕರಣದಲ್ಲಿ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಯುಎಸ್ ಎಸ್‌ಇಸಿ) ನ್ಯಾಯಾಲಯದ ಅನುಮತಿಯನ್ನು ಕೋರಿದೆ ಎಂಬ ವರದಿಗಳ ನಡುವೆ ಶುಕ್ರವಾರ ಅದಾನಿ ಗ್ರೂಪ್‌ನ ಶೇರುಗಳು ಶೇ.14.5ರವರೆಗೆ ಕುಸಿದಿವೆ.
ಗ್ರೂಪ್‌ನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ಪ್ರೈಸಸ್‌ನ ಶೇರುಗಳು ಶೇ.10.65ರಷ್ಟು ಕುಸಿದು 1,864.20 ರೂ.ಗೆ ತಲುಪಿದ್ದರೆ, ಅದಾನಿ ಪವರ್ 132.96 ರೂ.ಗೆ(ಶೇ.5.65 ನಷ್ಟ),ಅದಾನಿ ಪೋರ್ಟ್ಸ್ 1,308.40 ರೂ.ಗೆ (ಶೇ.7.48 ನಷ್ಟ),ಅದಾನಿ ಟೋಟಲ್ ಗ್ಯಾಸ್ 517.45 ರೂ.ಗೆ (ಶೇ.5.57 ನಷ್ಟ) ಕುಸಿದಿವೆ.
ಡಿಸೆಂಬರ್ 2024ರ ತ್ರೈಮಾಸಿಕದಲ್ಲಿ 474 ಕೋ.ರೂ.ಗಳ ನಿವ್ವಳ ಲಾಭವನ್ನು ಗಳಿಸಿದ್ದ ಅದಾನಿ ಗ್ರೀನ್ ಎನರ್ಜಿ ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಕೇವಲ ಐದು ಕೋ.ರೂ.ಗಳ ಕ್ರೋಡೀಕೃತ ನಿವ್ವಳ ಲಾಭವನ್ನು ವರದಿ ಮಾಡಿದ ಬಳಿಕ ಅದರ ಶೇರಿನ ಬೆಲೆ 772.80 ರೂ.ಗೆ (ಶೇ.14.54 ನಷ್ಟ) ಕುಸಿದಿದೆ.
ಅದಾನಿ ಎನರ್ಜಿ ಸೊಲ್ಯೂಷನ್ಸ್‌ನ ಶೇರುಗಳ ಬೆಲೆ 812.70 ರೂ.ಗೆ (ಶೇ.12.12 ನಷ್ಟ) ಕುಸಿದಿದೆ. ಡಿಸೆಂಬರ್ 2024ರ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ವಿತ್ತವರ್ಷದ ಇದೇ ಅವಧಿಯಲ್ಲಿ ಅದರ ಕ್ರೋಡೀಕೃತ ನಿವ್ವಳ ಲಾಭ ಶೇ.8ಕ್ಕೂ ಅಧಿಕ ಕುಸಿದು 574.06 ಕೋ.ರೂ.ಆಗಿದೆ.
ಅದಾನಿ ಗ್ರೂಪ್‌ನ ಅಂಬುಜಾ ಸಿಮೆಂಟ್ಸ್ 518.60 ರೂ.ಗೆ( ಶೇ.5.12 ನಷ್ಟ) ಮತ್ತು ಎನ್‌ಡಿಟಿವಿ 81.12 ರೂ.ಗೆ (ಶೇ.4.71 ನಷ್ಟ) ಕುಸಿದಿವೆ. ಸಾಂಘಿ ಇಂಡಸ್ಟ್ರೀಸ್ 60.44 ರೂ.ಗೆ( ಶೇ.5.80 ನಷ್ಟ) ಮತ್ತು ಎಸಿಸಿ 1678.90 ರೂ.ಗೆ (ಶೇ.2.85 ನಷ್ಟ) ಕುಸಿದಿವೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಇಂದು ಶೇ.0.94 ನಷ್ಟದೊಂದಿಗೆ 81,537.70 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ.0.95 ನಷ್ಟದೊಂದಿಗೆ 25,048.65ರಲ್ಲಿ ಮುಕ್ತಾಯಗೊಂಡಿವೆ.
ವರದಿಗಳ ಪ್ರಕಾರ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಭಾರತೀಯ ಅಧಿಕಾರಿಗಳಿಂದ ನೆರವು ಪಡೆಯಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಬ್ರೂಕ್ಲಿನ್‌ನಲ್ಲಿಯ ನ್ಯಾಯಾಲಯಕ್ಕೆ ತಿಳಿಸಿರುವ ಯುಸ್ ಎಸ್‌ಇಸಿ,ಹೀಗಾಗಿ ಇಮೇಲ್ ಮೂಲಕ ಅವರಿಗೆ ಸಮನ್ಸ್ ಜಾರಿಗೊಳಿಸಲು ಅನುಮತಿಯನ್ನು ಕೋರಿದೆ.
ಅಮೆರಿಕದಲ್ಲಿ 2024ರಲ್ಲಿ ಮೊಕದ್ದಮೆ ದಾಖಲಾಗಿದ್ದು,ಗೌತಮ ಅದಾನಿ ಮತ್ತು ಸಾಗರ್ ಅದಾನಿ ಅವರು ಅದಾನಿ ಗ್ರಿನ್ ಎನರ್ಜಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಯುಎಸ್ ಸೆಕ್ಯೂರಿಟಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.