×
Ad

ಆದಿವಾಸಿ ಯುವಕನ ಹತ್ಯೆ ಶಂಕೆ; ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ

Update: 2023-08-14 09:01 IST

ರಾಂಚಿ: ಬೊಕಾರೊದಲ್ಲಿ ಗುಂಪು ನ್ಯಾಯದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 17 ವರ್ಷದ ಆದಿವಾಸಿ ಯುವಕನನ್ನು ಹತ್ಯೆ ಮಾಡಿದ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

ಮೃತ ವ್ಯಕ್ತಿಯನ್ನು ಅನೇಶ್ವರ್ ಒರಾನ್ ಎಂದು ಗುರುತಿಸಲಾಗಿದ್ದು, ಈತ 13 ದಿನಗಳಿಂದ ನಾಪತ್ತೆಯಾಗಿದ್ದ. ಈತ ಕೊನೆಯದಾಗಿ ಶ್ರವಣ್ ಕುಮಾರ್ ಎಂಬ ಮೇಸ್ತ್ರಿಯ ಜತೆ ಕಾಣಿಸಿಕೊಂಡಿದ್ದ. ಬೊಕಾರೊ ಕೈಗಾರಿಕಾ ಪ್ರದೇಶದ ಕೆರೆ ಬಳಿ ಅನೇಶ್ವರ್‍ ನ ಮೃತದೇಹ ಪತ್ತೆಯಾದ ಬೆನ್ನಲ್ಲೇ, ಗ್ರಾಮಸ್ಥರು ಶ್ರವಣ್ ಕುಮಾರ್‍ ನನ್ನು ಹಿಡಿದು ಆತನನ್ನು ಮರಕ್ಕೆ ಕಟ್ಟಿಹಾಕಿ ನಿರ್ದಯವಾಗಿ ಬಿದಿರಿನ ಬಡಿಗೆಯಿಂದ ಥಳಿಸಿ  ಚಿತ್ರಹಿಂಸೆ ನೀಡಿದರು ಎನ್ನಲಾಗಿದೆ.

ಇಡೀ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನ ಸಾವಿಗೆ ಶ್ರವಣ್ ಕುಮಾರ್‍ ನನ್ನು ಹೊಣೆ ಮಾಡಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಥಳಿಸುತ್ತಿರುವ ದೃಶ್ಯ ಕಾಣಿಸುತ್ತಿದೆ. ಈ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ವ್ಯಕ್ತಿಯನ್ನು ರಕ್ಷಿಸಿದರು. ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News