×
Ad

ಕ್ಯಾಬ್‍ಗಳಿಗೆ ತಟ್ಟಿದ ʼಟಿಪ್ಸ್ʼ ಬಿಸಿ; ಈಗ ಐಚ್ಛಿಕವೆಂದು ಬದಲು

Update: 2025-06-01 23:35 IST

ಸಾಂದರ್ಭಿಕ ಚಿತ್ರ (credit: Grok)

ಹೊಸದಿಲ್ಲಿ: ಕ್ಯಾಬ್ ಸೇವೆಗೆ ಮುಂಗಡ ‘ಟಿಪ್ಸ್’ ಪಡೆಯುತ್ತಿದ್ದ ಓಲಾ, ಉಬರ್, ನಮ್ಮ ಯಾತ್ರಿ ಕಂಪನಿಗಳಿಗೆ ಈಗ ಬಿಸಿ ತಟ್ಟಿದೆ. ವಾಮಮಾರ್ಗದಲ್ಲಿ ಗ್ರಾಹಕರ ಸುಲಿಗೆ ಮಾಡುತ್ತಿದ್ದ ಈ ಸಾರಿಗೆಗಳಿಗ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ನೋಟಿಸ್ ಜಾರಿ ಮಾಡುತ್ತಲೇ ಎಚ್ಚೆತ್ತುಕೊಂಡಿವೆ. ಸಾರಿಗೆ ಸೇವಾ ಅಪ್ಲಿಕೇಷನ್‍ಗಳಲ್ಲಿ ಈಗ ಅಡ್ವಾನ್ಸ್ ಟಿಪ್ಸ್ ಬದಲಿಗೆ ಸ್ವಯಂ ಪ್ರೇರಿತ ಟಿಪ್ಸ್, ಐಚ್ಛಿಕ ಟಿಪ್ಸ್ ಎಂಬ ಹೊಸ ಪದ ಸೃಷ್ಟಿಯಾಗಿದೆ.

ಟಿಪ್ಸ್ ಎನ್ನುವುದು ಕ್ಯಾಬ್ ಚಾಲಕರ ಉತ್ತಮ ಸೇವೆಯನ್ನು ಮೆಚ್ಚಿ ಕೊಡುವಂತಹದ್ದು. ಕ್ಯಾಬ್‍ಗಳು ತ್ವರಿತವಾಗಿ ತೃಪ್ತಿಕರ ಸೇವೆ ಒದಗಿಸಿದರೆ ಗ್ರಾಹಕರು ಅದಕ್ಕೆ ಪ್ರತಿಯಾಗಿ ಸ್ವಇಚ್ಛೆಯಿಂದ ಚಾಲಕರ ಖುಷಿಗಾಗಿ ಕೊಡುವಂತಹದ್ದಾಗಿದೆ. ಆದರೆ, ಕ್ಯಾಬ್‍ಗಳವರು ಟಿಪ್ಸ್ ಅನ್ನು ಕ್ಯಾಬ್ ಬುಕ್ ಮಾಡುವಾಗಲೇ ಮುಂಗಡವಾಗಿ ಪಡೆಯುತ್ತಿದ್ದವು. ಈಗಿದಕ್ಕೆ ಬ್ರೇಕ್ ಬಿದ್ದಿದೆ.

ಅನೇಕ ಗ್ರಾಹಕರು ಮುಂಗಡ ಟಿಪ್ಸ್ ಬಗ್ಗೆ ಎನ್‍ಸಿಎಚ್ ಪೋರ್ಟಲ್ ಮೂಲಕ ದೂರು ನೀಡಿ ಕೇಂದ್ರದ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗಷ್ಟೇ  ಕ್ಯಾಬ್ ಕಂಪೆನಿಗಳ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಆದೇಶಿಸಿದ್ದರು. ಅದರಂತೆ ಓಲಾ ಸೇರಿದಂತೆ ಕ್ಯಾಬ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು.

ಸಿಸಿಪಿಎ ಗ್ರಾಹಕರ ಬೆಂಬಲಕ್ಕೆ ನಿಲ್ಲುತ್ತಲೇ ಈಗ ಕ್ಯಾಬ್ ಕಂಪೆನಿಗಳು ಎಚ್ಚೆತ್ತುಕೊಂಡಿವೆ. ನೋಟಿಸ್ ಪಡೆದ ಕೆಲವೇ ದಿನಗಳಲ್ಲಿ ಗ್ರಾಹಕರು ಬುಕ್ ಮಾಡುತ್ತಿದ್ದ ಅಪ್ಲಿಕೇಶನ್‍ಗಳಲ್ಲಿ ಈಗ ‘ಅಡ್ವಾನ್ಸ್ ಟಿಪ್ಸ್ʼ ಮಾಯವಾಗಿದೆ. ಆ ಜಾಗದಲ್ಲಿ ‘ಸ್ವಯಂ ಚಾಲಿತ ಟಿಪ್ಸ್’ ಮತ್ತು ಐಚ್ಛಿಕ ಟಿಪ್ಸ್’ ಎಂಬ ಪದ ಹುಟ್ಟಿಕೊಂಡಿದೆ. ಇದರ ಪ್ರಕಾರ ಗ್ರಾಹಕರು ಇನ್ನು ಮುಂಗಡವಾಗಿ ಟಿಪ್ಸ್ ಭರಿಸಬೇಕಿಲ್ಲ. ಅಲ್ಲದೇ, ಕಂಪೆನಿಗಳು ಟಿಪ್ಸ್ ಗಾಗಿ ಗ್ರಾಹಕರ ಮೇಲೆ ಯಾವುದೇ ರೂಪದ ಒತ್ತಾಯ ಮಾಡುವಂತಿಲ್ಲ. ಟಿಪ್ಸ್ ಎನ್ನುವುದು ಸ್ವ ಇಚ್ಛೆ ಎನ್ನುವಂತಹ ಗ್ರಾಹಕರ ನ್ಯಾಯಸಮ್ಮತ ನಿಲುವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಜೋಶಿ ಎತ್ತಿ ಹಿಡಿದಿದ್ದಾರೆ.

ಯಾತ್ರಿ ಮತ್ತು ಓಲಾದಂತಹ ಪ್ಲಾಟ್‍ಫಾರ್ಮ್‍ಗಳಲ್ಲಿ ಈಗ ಗ್ರಾಹಕರು ಟಿಪ್ಸ್ ಆಯ್ಕೆಯನ್ನು ಬಿಟ್ಟುಬಿಡಬಹುದು. ಉಬರ್ ಸ್ವಯಂ ಚಾಲಿತ ಲೇಬಲ್ ಪರಿಚಯಿಸಿಲ್ಲವಾದರೂ ಬುಕಿಂಗ್ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಡ್ವಾನ್ಸ್ ಟಿಪ್ ಕಾಣಿಸಿಕೊಳ್ಳದಂತೆ ಅಪ್ಲಿಕೇಷನ್ ಅನ್ನು ಪರಿವರ್ತಿಸಿದಂತೆ ಗೋಚರಿಸಿದೆ. ಕ್ಯಾಬ್ ಬುಕ್ ಮಾಡಲು ನಿತ್ಯವೂ ಓಲಾ, ಉಬರ್ ರೈಡ್ ಅಪ್ಲಿಕೇಶನ್‍ಗಳನ್ನು ಬಳಸುತ್ತೇವೆ. ಕೆಲ ವಾರಗಳ ಹಿಂದೆ ಬುಕ್ ಮಾಡುವಾಗಲೇ ಅಪ್ಲಿಕೇಶನ್ ಅಲ್ಲಿ ಟಿಪ್ಸ್ ಭರಿಸಬೇಕಿತ್ತು.

ಸೇವೆಗೂ ಮೊದಲೇ ಟಿಪ್ಸ್ ನೀಡುವುದು ವಿಚಿತ್ರವೆನಿಸಿತ್ತು. ಆದರೆ, ಈಗ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಅಪ್ಲಿಕೇಷನ್‍ಗಳಲ್ಲಿ ನವೀಕರಣ ಕಂಡುಬಂದಿದೆ. ಟಿಪ್ ಬಾಕ್ಸ್ ಪಕ್ಕದಲ್ಲಿ ‘ಸ್ವಯಂ ಪ್ರೇರಿತ' ಮತ್ತು ಟಿಪ್ ಐಚ್ಛಿಕ ಎಂಬ ಸಣ್ಣ ಲೇಬಲ್ ಕಾಣಿಸುತ್ತಿದೆ. ಇದರಿಂದ ಒತ್ತಾಯ ಪೂರ್ವಕ ಟಿಪ್ಸ್ ವಸೂಲಿ ತಪ್ಪಿದೆ ಎಂದು ಖುದ್ದು ಗ್ರಾಹಕರೇ ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News