×
Ad

ಕೇರಳ ಐವರ ಹತ್ಯೆ ಪ್ರಕರಣ | ನಮ್ಮದು ದೊಡ್ಡ ಮಟ್ಟದಲ್ಲಿ ಆರ್ಥಿಕ ಸಮಸ್ಯೆ ಇರುವ ಕುಟುಂಬವಲ್ಲ: ಆರೋಪಿಯ ತಂದೆ ಪ್ರತಿಕ್ರಿಯೆ

Update: 2025-03-02 13:10 IST

Photo | keralakaumudi

ತಿರುವನಂತಪುರಂ: ಕೇರಳ ರಾಜ್ಯವನ್ನು ತಲ್ಲಣಗೊಳಿಸಿದ ಐವರ ಸರಣಿ ಹತ್ಯೆಗೆ ಆರ್ಥಿಕ ಸಂಕಷ್ಟ ಪ್ರಮುಖ ಕಾರಣವೆಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ಪೊಲೀಸರ ಹೇಳಿಕೆಯನ್ನು ತಳ್ಳಿ ಹಾಕಿದ ಆರೋಪಿ ಅಫನ್ ತಂದೆ ಅಬ್ದುಲ್ ರಹೀಂ, ʼನಮ್ಮದು ದೊಡ್ಡ ಮಟ್ಟದಲ್ಲಿ ಆರ್ಥಿಕ ಸಮಸ್ಯೆ ಇರುವ ಕುಟುಂಬವಲ್ಲ, ನನ್ನ ಕುಟುಂಬಸ್ಥರು ನನಗೆ ವಿದೇಶಕ್ಕೆ ಹಣ ಕಳುಹಿಸಿಲ್ಲ, ನಾನು ಕುಟುಂಬದ ಜೊತೆ ನಿರಂತರ ಸಂಪರ್ಕದಿಂದಿದ್ದೆʼ ಎಂದು ಹೇಳಿದ್ದಾರೆ.

ಸರಣಿ ಹತ್ಯೆಯ ಸುದ್ದಿ ತಿಳಿದು ಸೌದಿ ಅರೇಬಿಯಾದಲ್ಲಿದ್ದ ಅಬ್ದುಲ್ ರಹೀಂ ತವರಿಗೆ ಮರಳಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಹೀಂ, ಅಫನ್ ಹೇಳುವಷ್ಟು ಆರ್ಥಿಕ ಸಂಕಷ್ಟ ನಮ್ಮ ಕುಟುಂಬಕ್ಕೆ ಇರಲಿಲ್ಲ. ನಾನು ಮನೆಯ ಸಾಲ ತೀರಿಸಿದ್ದೇನೆ. ಅಫನ್ ಯಾಕೆ ಹೀಗೆ ಹೇಳುತ್ತಿದ್ದಾನೆ ಎಂದು ಗೊತ್ತಿಲ್ಲ. ನನ್ನ ಕುಟುಂಬ ವಿದೇಶಕ್ಕೆ ಹಣ ಕಳುಹಿಸಿಲ್ಲ. ನಾನು ನನ್ನ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ಕಳೆದ ವಾರವೂ ನಾನು ಅಫನ್ ಜೊತೆ ಮಾತನಾಡಿದ್ದೆ. ಅಫನ್ ತಾಯಿಯ ಆರೋಗ್ಯ ಸ್ಥಿತಿ ಸುಧಾರಿಸಿದೆ. ಎಲ್ಲರೂ ಪ್ರಾರ್ಥಿಸಬೇಕು. ನಾನು ಬೇರೆ ಏನೂ ಹೇಳಬೇಕಾಗಿಲ್ಲ. ಏನಾಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದ್ದಾರೆ.

ಈ ಮೊದಲು ಹೇಳಿಕೆ ನೀಡಿದ್ದ ತಿರುವನಂತಪುರಂ ಪೊಲೀಸರು, ʼಅಫನ್ ಕುಟುಂಬ 13 ಮಂದಿಗೆ 65 ಲಕ್ಷ ರೂ.ಸಾಲ ಮರು ಪಾವತಿ ಮಾಡಬೇಕಿರುವುದಕ್ಕೆ ಸಾಕ್ಷ್ಯವನ್ನು ನಾವು ಸಂಗ್ರಹಿಸಿದ್ದೇವೆ. ಆರ್ಥಿಕ ಸಂಕಷ್ಟ ಹತ್ಯೆ ಹಿಂದಿನ ಪ್ರಮುಖ ಕಾರಣ. ಸಾಲ ಕೊಟ್ಟವರು ಹಣಕ್ಕಾಗಿ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಅಫನ್ ಮತ್ತು ಆತನ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿತ್ತುʼ ಎಂದು ಹೇಳಿದ್ದರು.

ಅಫನ್ ತಾಯಿ ಶೆಮಿನಾ ತನ್ನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಚಿಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರು. ಮೃತ ಲತೀಫ್ ಪತ್ನಿ ಶಾಹಿದಾ ಚಿಟ್ ಫಂಡ್ ಹಣವನ್ನು ಪಡೆದಿದ್ದಾರೆ. ಆದರೆ, ಆಕೆ ಹಣ ವಾಪಾಸ್ಸು ನೀಡಿರಲಿಲ್ಲ. ಈ ವಿಚಾರವಾಗಿ ಲತೀಫ್ ಮತ್ತು ಅಫನ್ ನಡುವೆ ವಾಗ್ವಾದ ನಡೆದಿದೆ. ಅಫನ್ ತನ್ನೊಂದಿಗೆ ಗಲಾಟೆ ಮಾಡಿರುವ ಬಗ್ಗೆ ಲತೀಫ್ ತನ್ನ ಹತ್ತಿರದ ಸಂಬಂಧಿಗಳಿಗೂ ತಿಳಿಸಿದ್ದ ಎಂದು ತನಿಖೆ ಬಳಿಕ ಹೇಳಿಕೊಂಡಿದ್ದರು.

ಸಧ್ಯ ಆಸ್ಪತ್ರೆಯಲ್ಲಿರುವ ಆರೋಪಿ ಅಫನ್ ಚೇತರಿಸಿಕೊಳ್ಳುತ್ತಿದ್ದಾನೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಅಫನ್ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ. ಆತನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಸರಣಿ ಹತ್ಯೆಗೆ ಸರಿಯಾದ ಕಾರಣ ತಿಳಿದು ಬರಬೇಕಿದೆ.

ಸೌಜನ್ಯ: keralakaumudi

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News