×
Ad

ಮುಂಬೈ ಹಾಗೂ ಹೈದರಾಬಾದ್ ನಲ್ಲಿನ ಅಫ್ಘನ್ ರಾಜತಾಂತ್ರಿಕ ಕಚೇರಿಗಳನ್ನು ಮತ್ತೆ ತೆರೆಯಲಾಗಿದೆ ಎಂದ ತಾಲಿಬಾನ್: ವರದಿ

Update: 2023-11-29 19:35 IST

Photo: NDTV 

ಕಾಬೂಲ್: ಮುಂಬೈ ಹಾಗೂ ಹೈದರಾಬಾದ್ ನಲ್ಲಿನ ಅಫ್ಘನ್ ರಾಜತಾಂತ್ರಿಕ ಕಚೇರಿಗಳನ್ನು ಪುನಃ ತೆರೆಯಲಾಗಿದ್ದು, ಅವು ಭಾರತದಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ತಾಲಿಬಾನ್ ನಿಂದ ನೇಮಕಗೊಂಡಿರುವ ಅಫ್ಘಾನಿಸ್ತಾನ ವಿದೇಶಾಂಗ ವ್ಯವಹಾರಗಳ ಉಪ ರಾಜಕೀಯ ಸಚಿವ ಶೇರ್ ಮುಹಮ್ಮದ್ ಅಬ್ಬಾಸ್ ಸ್ಟ್ಯಾನಿಕ್ ಝೈ ತಿಳಿಸಿದ್ದಾರೆ ಎಂದು ಬುಧವಾರ The Khaama Press ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಮುಂಬೈ ಹಾಗೂ ಹೈದರಾಬಾದ್ ನಲ್ಲಿನ ನಮ್ಮ ರಾಜತಾಂತ್ರಿಕ ಕಚೇರಿಗಳು ಕಾರ್ಯನಿರ್ವಹಿಸತೊಡಗಿವೆ. ನಾನು ಅವರೊಂದಿಗೆ ಮಾತನಾಡಿದ್ದು, ಅವರು ರಾಜತಾಂತ್ರಿಕ ಕಚೇರಿಗಳನ್ನು ಮತ್ತೆಆರಂಭಿಸಿದ್ದಾರೆ” ಎಂದು ಹೇಳಿದ್ದಾರೆ ಎಂದು ಸಚಿವರನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

“ಭಾರತದಲ್ಲಿನ ಅಫ್ಘಾನಿಸ್ತಾನ ರಾಜತಾಂತ್ರಿಕ ಕಚೇರಿಗಳು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ ಎಂಬುದು ನೈಜವಲ್ಲ” ಎಂದು ತಾಲಿಬಾನ್ ಆಡಳಿತದೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ ಎಂದು ಈ ಅಫ್ಘಾನಿಸ್ತಾನ ಮೂಲದ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಭಾರತದಲ್ಲಿನ ರಾಯಭಾರಿ ಕಚೇರಿಗಳು ಹಾಗೂ ರಾಜತಾಂತ್ರಿಕ ಕಚೇರಿಗಳು ಸಚಿವಾಲಯದೊಂದಿಗೆ ಸಂಪರ್ಕದಲ್ಲಿವೆ ಎಂದು ಪ್ರತಿಪಾದಿಸಿರುವ ಸಚಿವರು, “ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಲಾಗಿದೆ ಹಾಗೂ ಸೇವೆಗಳನ್ನು ಒದಗಿಸಲಾಗುತ್ತಿಲ್ಲ ಎಂದು ನಯೀಮಿ ಎಂಬ ಹೆಸರಿನ ರಾಯಭಾರಿಯ ಪ್ರತಿಪಾದನೆ ಸುಳ್ಳು” ಎಂದು ಹೇಳಿದ್ದಾರೆ ಎಂದು The Khaama Press ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ, ನವೆಂಬರ್ 23ರಿಂದ ಭಾರತದಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸುವ ಯಾವುದೇ ರಾಯಭಾರಿ ಇಲ್ಲ ಎಂದು ನವೆಂಬರ್ 25ರಂದು ಅಫ್ಘನ್ ರಾಜತಾಂತ್ರಿಕ ಕಚೇರಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News