×
Ad

ಮಣಿಪುರ ಬಿಕ್ಕಟ್ಟಿಗೆ ಎಎಫ್‌ಎಸ್‌ಪಿಎ ಪರಿಹಾರವಲ್ಲ: ಇರೋಮ್ ಶರ್ಮಿಳಾ

Update: 2023-09-28 22:52 IST

                                                                 ಇರೋಮ್ ಶರ್ಮಿಳಾ| Photo: PTI 

ಹೊಸದಿಲ್ಲಿ: ಮಣಿಪುರದ ಹೆಚ್ಚಿನ ಭಾಗಗಳಲ್ಲಿ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯನ್ನು ಮತ್ತೆ 6 ತಿಂಗಳು ವಿಸ್ತರಿಸಿದ ಒಂದು ದಿನದ ಬಳಿಕ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ, ಈ ‘‘ದಬ್ಬಾಳಿಕೆಯ ಕಾನೂನು’’ ರಾಜ್ಯದ ಸಂಘರ್ಷಕ್ಕೆ ಪರಿಹಾರವಲ್ಲ ಎಂದಿದ್ದಾರೆ.

‘ಮಣಿಪುರದ ಉಕ್ಕಿನ ಮಹಿಳೆ’ ಎಂದು ಪ್ರಶಂಸೆಗೆ ಒಳಗಾಗಿರುವ ಶರ್ಮಿಳಾ ಗುರುವಾರ ಪಿಟಿಐಯೊಂದಿಗಿನ ದೂರವಾಣಿ ಸಂದರ್ಶನದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಏಕರೂಪ ನಾಗರಿಕ ಸಂಹಿತೆಯಂತಹ ಪ್ರಸ್ತಾವಗಳ ಮೂಲಕ ಏಕರೂಪತೆ ತರಲು ಕಾರ್ಯ ನಿರ್ವಹಿಸುವ ಬದಲು ವೈವಿಧ್ಯತೆಗೆ ಗೌರವ ನೀಡಬೇಕು ಎಂದಿದ್ದಾರೆ.

ಇಂಫಾಲದ 19 ಪೊಲೀಸ್ ಠಾಣಾ ಪ್ರದೇಶ ಹಾಗೂ ನೆರೆಯ ಅಸ್ಸಾಂನೊಂದಿಗೆ ತನ್ನ ಗಡಿ ಹಂಚಿಕೊಂಡ ಪ್ರದೇಶ ಹೊರತುಪಡಿಸಿ ಮಣಿಪುರದಲ್ಲಿ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಬುಧವಾರ ಇನ್ನೂ 6 ತಿಂಗಳು ವಿಸ್ತರಿಸಲಾಗಿದೆ.

ರಾಜ್ಯದ ಜನಾಂಗೀಯ ಹಿಂಸಾಚಾರ ಅಥವಾ ಸಮಸ್ಯೆಗಳಿಗೆ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿಸ್ತರಣೆ ಪರಿಹಾರವಲ್ಲ. ಕೇಂದ್ರ ಹಾಗೂ ಮಣಿಪುರ ಸರಕಾರ ಈ ಪ್ರದೇಶದ ವೈವಿಧ್ಯತೆಗೆ ಗೌರವ ನೀಡಬೇಕು ಎಂದು ಅವರು ಹೇಳಿದ್ದಾರೆ.

‘‘ವಿವಿಧ ಜನಾಂಗೀಯ ಗುಂಪುಗಳ ಮೌಲ್ಯ, ತತ್ವ ಹಾಗೂ ಅಭ್ಯಾಸಗಳಿಗೆ ಗೌರವ ನೀಡಬೇಕು. ಭಾರತ ತನ್ನ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಆದರೆ, ಕೇಂದ್ರ ಸರಕಾರ ಹಾಗೂ ಬಿಜೆಪಿ ಏಕರೂಪ ನಾಗರಿಕ ಸಂಹಿತೆಯಂತಹ ಪ್ರಸ್ತಾವಗಳ ಮೂಲಕ ಏಕರೂಪವನ್ನು ಸೃಷ್ಟಿಸಲು ಹೆಚ್ಚು ಆಸಕ್ತಿ ಹೊಂದಿದೆ’’ ಎಂದು ಅವರು ಹೇಳಿದರು.

‘‘ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ನಾಯಕರು. ಅವರು ರಾಜ್ಯಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದ್ದರೆ, ಈಗಾಗಲೇ ಸಮಸ್ಯೆ ಬಗೆ ಹರಿಯುತ್ತಿತ್ತು. ಈ ಹಿಂಸಾಚಾರಕ್ಕೆ ಪರಿಹಾರ ಸಹಾನುಭೂತಿ, ಪ್ರೀತಿ, ಮಾನವೀಯತೆಯ ಸ್ಪರ್ಶದಲ್ಲಿ ಇದೆ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ’’ ಎಂದು ಅವರು ಹೇಳಿದರು.

ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನು ಟೀಕಿಸಿದ ಅವರು, ರಾಜ್ಯ ಸರಕಾರದ ತಪ್ಪು ನೀತಿಗಳು ಮಣಿಪುರವನ್ನು ಈ ಬಿಕ್ಕಟ್ಟಿಗೆ ದೂಡಿದೆ ಎಂದರು.

ಜನಾಂಗೀಯ ಹಿಂಸಾಚಾರದಿಂದ ರಾಜ್ಯದ ಯುವ ಜನತೆ ತೀವ್ರ ಸಂತ್ರಸ್ತರಾಗಿದ್ದರೆ ಎಂದು ಹೇಳಿದ ಶರ್ಮಿಳಾ, ವ್ಯಾಪಕವಾಗಿ ಹರಡಿದ ಪ್ರತಿಭಟನೆಯಲ್ಲಿ ಯುವಕರು ಹಾಗೂ ಯುವತಿಯರು ಸಾವಿಗೀಡಾಗಿರುವುದು ನನ್ನ ಕಣ್ಣಲ್ಲಿ ನೀರು ತರಿಸಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News