×
Ad

75 ವರ್ಷಗಳ ನಂತರ ವ್ಯಕ್ತಿಯೊಬ್ಬ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು: ಮೋಹನ್ ಭಾಗವತ್ ಹೀಗೆ ಹೇಳಿದ್ದೇಕೆ?

Update: 2025-07-10 20:17 IST

ಮೋಹನ್ ಭಾಗವತ್ | PTI 

ನಾಗ್ಪುರ: 75 ವರ್ಷಗಳ ನಂತರ ವ್ಯಕ್ತಿಯೊಬ್ಬ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಬುಧವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಾಗಪುರದ ವನಮತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘ ಪರಿವಾರದ ಹಿರಿಯ ಅಧಿಕಾರಿ ಮೊರೊಪಂತ್ ಪಿಂಗ್ಲೆಯನ್ನು ಶ್ಲಾಘಿಸಿದರು. ಈ ವೇಳೆ, ಮೊರೊಪಂತ್ ಪಿಂಗ್ಲೆಗೆ 75 ವರ್ಷಗಳಾಗುತ್ತಿರುವುದರಿಂದ, ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು ಎಂದು ವೃಂದಾವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು. ಈ ಹಿಂದೆ ಸಹ ಕಾರ್ಯವಾಹಕರಾಗಿದ್ದ ಶೇಷಾದ್ರಿಯವರು ಮೊರೊಪಂತ್‌ರಿಗೆ ಶಾಲು ಹೊದಿಸುವ ಮೂಲಕ ಸನ್ಮಾನಿಸಿದರು.

ಈ ವೇಳೆ, ನನಗೆ 75ರ ಅರ್ಥ ತಿಳಿದಿದೆ ಎಂದು ಮೊರೊಪಂತ್ ಹೇಳಿದರು.‌ ಮೊರೊಪಂತ್‌ರನ್ನು ಸ್ಮರಿಸಿದ ಮೋಹನ್ ಭಾಗವತ್, ಇದು ಅವರ ಒಂದು ಬೋಧನೆಯಾಗಿದೆ. ಯಾವುದೇ ಪ್ರಚಾರವಿಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸೇವೆ ಸಲ್ಲಿಸಿ, 75 ವರ್ಷದ ನಂತರ ನಿವೃತ್ತರಾಗುವುದನ್ನು ಮೊರೊಪಂತ್ ಕಲಿಸಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ ರ ಈ ಹೇಳಿಕೆಯ ಬೆನ್ನಿಗೇ, ಪ್ರಧಾನಿ ನರೇಂದ್ರ ಮೋದಿಯವರನ್ನೇ ಉಲ್ಲೇಖಿಸಿ ನೀಡಿರುವ ಹೇಳಿಕೆಯಿದು ಎಂಬ ಚರ್ಚೆ ರಾಜಕೀಯ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಬಿರುಸುಗೊಂಡಿದೆ.ಈ ವರ್ಷದ ಸೆಪ್ಟೆಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News