ಒಬಿಸಿ ಪಟ್ಟಿಯಿಂದ 14 ಮುಸ್ಲಿಂ ಗುಂಪುಗಳನ್ನು ಕೈಬಿಡಲು ರಾಜಸ್ಥಾನ ಸರ್ಕಾರ ಚಿಂತನೆ
ಭಜನ್‍ಲಾಲ್ ಶರ್ಮಾ | PTI
ಜೈಪುರ: ಪಶ್ಚಿಮ ಬಂಗಾಳ ಸರ್ಕಾರ ಸಿದ್ಧಪಡಿಸಿದ ಇತರ ಹಿಂದುಳಿದ ವರ್ಗಗಳ ಪಟ್ಟಿಯಿಂದ ಬಹುತೇಕ ಮುಸ್ಲಿಂ ಪಂಗಡಗಳು ಸೇರಿದಂತೆ 77 ವರ್ಗಗಳನ್ನು ಕೊಲ್ಕತ್ತಾ ಹೈಕೋರ್ಟ್ ಕಿತ್ತುಹಾಕಿದ ಬೆನ್ನಲ್ಲೇ, ರಾಜಸ್ಥಾನದ ಒಬಿಸಿ ಪಟ್ಟಿಯಲ್ಲಿರುವ 14 ಮುಸ್ಲಿಂ ಗುಂಪುಗಳ ಬಗ್ಗೆ ಪುನರ್ ವಿಮರ್ಶೆ ನಡೆಸಲು ಬಿಜೆಪಿ ಆಡಳಿತದ ರಾಜಸ್ಥಾನ ಸರ್ಕಾರ ಮುಂದಾಗಿದೆ.
"ಲೋಕಸಭಾ ಚುನಾವಣೆ ಪ್ರಕಟವಾಗಿ ಮಾದರಿ ನೀತಿಸಂಹಿತೆ ಮುಗಿದ ಬಳಿಕ ಅಂದರೆ ಜೂನ್ 4ರಂದು 1997ರಿಂದ 2013ರ ಅವಧಿಯಲ್ಲಿ ಒಬಿಸಿ ಪಟ್ಟಿಗೆ ಈ ಮುಸ್ಲಿಂ ಸಮುದಾಯಗಳನ್ನು ಸೇರಿಸಿರುವ ಕ್ರಮ ಕಾನೂನುಬದ್ಧವೇ ಅಥವಾ ಕಾನೂನುಬಾಹಿರವೇ ಎಂದು ಮರು ಪರಿಶೀಲನೆ ನಡೆಸಲಿದ್ದೇವೆ" ಎಂದು ರಾಜಸ್ಥಾನದ ಸಾಮಾಜಿಕ ನ್ಯಾಯ ಖಾತೆ ಸಚಿವ ಅವಿನಾಶ್ ಗೆಹ್ಲೋಟ್ ಹೇಳಿದ್ದಾರೆ.
ಕೊಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿರುವ ಅವರು, ಧರ್ಮ ಆಧರಿತ ಮೀಸಲಾತಿ ತಪ್ಪು ಎಂದು ವಿಶ್ಲೇಷಿಸಿದರು.
ಲಕ್ನೋದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಭಜನ್‍ಲಾಲ್ ಶರ್ಮಾ, "ಮುಸ್ಲಿಮರಿಗೆ ಒಬಿಸಿ ಕೋಟಾ ನೀಡುವ ಮೂಲಕ ಓಲೈಕೆ ಮತ್ತು ಗಂಭೀರ ಪಾಪವನ್ನು ಎಸಗುವ ವಿಚಾರದಲ್ಲಿ ಟಿಎಂಸಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಇಂಡಿಯಾ ಮೈತ್ರಿಕೂಟ ಎಲ್ಲ ಎಲ್ಲೆಗಳನ್ನು ಮೀರಿದೆ" ಎಂಬ ಆರೋಪ ಮಾಡಿದರು.