ಎಸ್‌ಬಿಐ ಬಳಿಕ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅನಿಲ್ ಅಂಬಾನಿಯನ್ನು ‘ವಂಚನೆ’ ಎಂದು ವರ್ಗೀಕರಿಸಿದ "ಬ್ಯಾಂಕ್ ಆಫ್ ಇಂಡಿಯಾ"
ಅನಿಲ ಅಂಬಾನಿ |PC : PTI
ಹೊಸದಿಲ್ಲಿ,ಆ.24: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್)ನ ಖಾತೆಗಳನ್ನು ‘ವಂಚನೆ’ ಎಂದು ಎಸ್‌ಬಿಐ ವರ್ಗೀಕರಿಸಿದ ಬಳಿಕ ಇದೀಗ ಬ್ಯಾಂಕ್ ಆಫ್ ಇಂಡಿಯಾ(ಬಿಒಐ) ಕೂಡ ಪ್ರವರ್ತಕ ಅನಿಲ ಅಂಬಾನಿ, ಆರ್‌ಕಾಮ್ ಮತ್ತು ರಿಲಯನ್ಸ್ ಟೆಲಿಕಾಮ್‌ನ ಸಾಲ ಖಾತೆಗಳನ್ನು ‘ವಂಚನೆ’ ಎಂದು ವರ್ಗೀಕರಿಸಿದೆ. ಸಾಲದ ಹಣವನ್ನು ಅನ್ಯ ಉದ್ದೇಶಗಳಿಗಾಗಿ ಬಳಸಲಾಗಿದೆ ಮತ್ತು ಸಾಲ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅದು ಆರೋಪಿಸಿದೆ. ಬಿಒಐ ನೋಟಿಸ್ ಈ ಕಂಪೆನಿಗಳೊಂದಿಗೆ ಸಂಪರ್ಕ ಹೊಂದಿರುವ ಇತರ ಹಲವಾರು ಜನರನ್ನೂ ಒಳಗೊಂಡಿದೆ.
ಕಂಪೆನಿಯು ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ ಆರ್‌ಕಾಮ್ ಆ.22, 2025ರಂದು ಬಿಒಐನಿಂದ ಆ.8ರ ದಿನಾಂಕ ಹೊಂದಿರುವ ಪತ್ರವನ್ನು ಸ್ವೀಕರಿಸಿದೆ.
ಕಂಪೆನಿ,ಅನಿಲ ಅಂಬಾನಿ ಮತ್ತು ಮಂಜರಿ ಆಶಿಕ್ ಕಾಕರ್ ಅವರ ಸಾಲ ಖಾತೆಗಳನ್ನು ಬಾಕಿಯಿರುವ 724.78 ಕೋ.ರೂ.ಗಳ ಸಾಲಮೊತ್ತಕ್ಕಾಗಿ ‘ವಂಚನೆ’ ಎಂದು ವರ್ಗೀಕರಿಸಲಾಗಿದೆ ಎಂದು ಬಿಒಐ ಆರ್‌ಕಾಮ್‌ಗೆ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ಸಾಲ ಖಾತೆಯಲ್ಲಿ 724.78 ಕೋ.ರೂ.ಗಳ ಮರುಪಾವತಿ ಬಾಕಿಯಿದ್ದು, ಸಾಲಗಾರರ ಖಾತೆಯನ್ನು 30.06.2017ರಂದು ಅನುತ್ಪಾದಕ ಆಸ್ತಿ(ಎನ್‌ಪಿಎ) ಎಂದು ಪರಿವರ್ತಿಸಲಾಗಿದೆ. ಬಾಕಿ ಮರುಪಾವತಿಗಾಗಿ ಬ್ಯಾಂಕು ಸಾಲಗಾರರು ಮತ್ತು ಖಾತರಿದಾರರೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ಬಾಕಿಯನ್ನು ಮರುಪಾವತಿಸಲು ಅವರು ವಿಫಲಗೊಂಡಿದ್ದಾರೆ ಮತ್ತು ನಿರ್ಲಕ್ಷಿಸಿದ್ದಾರೆ ಎಂದು ಬಿಒಐ ಪತ್ರದಲ್ಲಿ ತಿಳಿಸಿದೆ.
ರಿಲಯನ್ಸ್ ಟೆಲಿಕಾಮ್‌ಗೆ ಜಾರಿಗೊಳಿಸಿರುವ ನೋಟಿಸ್‌ನಲ್ಲಿ ಬಿಒಐ 51.77 ಕೋ.ರೂ.ಗಳ ಬಾಕಿಗಾಗಿ ಕಂಪೆನಿಯ ಹಾಗೂ ನಿರ್ದೇಶಕರಾದ ಗ್ರೇಸ್ ಥಾಮಸ್ ಮತ್ತು ಸತೀಶ ಸೇಠ್ ಅವರ ಖಾತೆಗಳನ್ನು ‘ವಂಚನೆ’ ಎಂದು ವರ್ಗೀಕರಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರಲ್ಲಿ ಗೌತಮ ಭಾಯಿಲಾಲ್ ದೋಶಿ, ದಗ್ಡೂಲಾಲ್ ಕಸ್ತೂರಚಂದ್ ಜೈನ್ ಮತ್ತು ಪ್ರಕಾಶ ಶೆಣೈ ಅವರು ಸೇರಿದ್ದಾರೆ.
ಆರ್‌ಕಾಮ್ ಮತ್ತು ಅದರ ಅಂಗಸಂಸ್ಥೆಗಳು ಬ್ಯಾಂಕುಗಳಿಂದ ಒಟ್ಟು 31,580 ಕೋ.ರೂ.ಗಳ ಸಾಲಗಳನ್ನು ಪಡೆದಿದ್ದವು.
ಸಿಬಿಐ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮುಂಬೈನಲ್ಲಿ ಅನಿಲ ಧೀರುಭಾಯಿ ಅಂಬಾನಿ ಗ್ರೂಪ್(ಅಡಾಗ್)ಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಆರ್‌ಕಾಮ್‌ನ ಕಚೇರಿ ಮತ್ತು ಅನಿಲ ಅಂಬಾನಿಯವರ ನಿವಾಸ ಸೇರಿದಂತೆ ಮುಂಬೈನ ಎರಡು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಎಸ್‌ಬಿಐ ದೂರಿನ ಆಧಾರದಲ್ಲಿ ಆರ್‌ಕಾಮ್,ಅದರ ನಿರ್ದೇಶಕ ಅನಿಲ ಅಂಬಾನಿ,ಅಪರಿಚಿತ ಸರಕಾರಿ ನೌಕರರು ಮತ್ತು ಅಪರಿಚಿತ ಇತರರ ವಿರುದ್ಧ ಗುರುವಾರ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು ಎಂದು ಹೇಳಿಕೆಯು ತಿಳಿಸಿದೆ.
ಎಸ್‌ಬಿಐ ಜು.2ರಂದು ಆರ್‌ಕಾಮ್ ಮತ್ತು ಅನಿಲ ಅಂಬಾನಿ ಸಾಲಖಾತೆಗಳನ್ನು ‘ವಂಚನೆ’ ಎಂದು ವರ್ಗೀಕರಿಸಿತ್ತು. ಎಸ್‌ಬಿಐಗಿಂತ ಮುನ್ನ ಕೆನರಾ ಬ್ಯಾಂಕ್ ಕೂಡ ಆರ್‌ಕಾಮ್ ಅನ್ನು ‘ವಂಚನೆ’ ಎಂದು ವರ್ಗೀಕರಿಸಿತ್ತು.