ಬಾಳಾ ಠಾಕ್ರೆ ನಿಧನದ ಕುರಿತು ವಿವಾದಾತ್ಮಕ ಹೇಳಿಕೆ |ರಾಮ್‌ದಾಸ್ ಕದಮ್ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುತ್ತೇವೆ: ಶಿವಸೇನಾ ನಾಯಕ ಅನಿಲ್ ಪರಬ್
ರಾಮ್‌ದಾಸ್ ಕದಮ್ - ಅನಿಲ್ ಪರಬ್
ಹೊಸದಿಲ್ಲಿ, ಅ. 4: ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಸಾವಿಗೆ ಸಂಬಂಧಿಸಿ ಸುಳ್ಳು ಆರೋಪ ಮಾಡಿದ ಶಿವಸೇನೆಯ ರಾಮ್‌ದಾಸ್ ಕದಮ್ ವಿರುದ್ಧ ಮಾನ ಹಾನಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಶಿವಸೇನೆ (ಯುಬಿಟಿ) ನಾಯಕ ಹಾಗೂ ಎಂಎಲ್‌ಸಿ ಅನಿಲ್ ಪರಬ್ ಶನಿವಾರ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹಣ ದೊರಕಿದರೆ, ಅದನ್ನು ನೆರೆ ಸಂತ್ರಸ್ತ ರೈತರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಮದಾಸ್ ಕದಮ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಅನಿಲ್ ಪರಬ್ ಒತ್ತಾಯಿಸಿದ್ದಾರೆ. ಕದಮ್ ಅವರ ಪತ್ನಿ ಮೃತಪಟ್ಟ 1993ರ ಪ್ರಕರಣದ ತನಿಖೆ ನಡೆಸುವಂತೆ ಕೂಡ ಅವರು ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ನಿಗೂಢವಾಗಿ ಮುಚ್ಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈಗ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯಲ್ಲಿರುವ ಮಾಜಿ ರಾಜ್ಯ ಸಚಿವ ಕದಮ್ ಗುರುವಾರ ನಡೆದ ಪಕ್ಷದ ದಸರಾ ರ್ಯಾಲಿಯಲ್ಲಿ ನೀಡಿದ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ರ್ಯಾಲಿಯಲ್ಲಿ ಅವರು ಬಾಳಾ ಠಾಕ್ರೆ ನಿಧನರಾಗಿರುವುದನ್ನು ಘೋಷಿಸುವ ಮುನ್ನ ಅವರ ಮೃತದೇಹವನ್ನು ಎರಡು ದಿನಗಳ ಕಾಲ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದರು.
ಬಾಳಾ ಠಾಕ್ರೆ ಮೃತಪಟ್ಟ ಬಳಿಕ ಅವರ ಬೆರಳಚ್ಚನ್ನು ಉದ್ಧವ್ ಠಾಕ್ರೆ ತೆಗೆದುಕೊಂಡಿದ್ದರು ಎಂದು ಅವರು ಆರೋಪಿಸಿದ್ದರು. ಅಲ್ಲದೆ ಸತ್ಯವನ್ನು ಹೊರತರಲು ತನ್ನನ್ನು ಹಾಗೂ ಉದ್ಧವ್ ಠಾಕ್ರೆ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಅವರು ಆಗ್ರಹಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು, ಕದಂ ಅವರ ಹೇಳಿಕೆ ಬಾಳಾ ಸಾಹೇಬ್ ಪರಂಪರೆಗೆ ದ್ರೋಹ ಎಸಗಿರುವುದಕ್ಕೆ ಸಮಾನವಾದುದು ಎಂದಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದು ದಿವಂಗತ ಬಾಳಾ ಸಾಹಾಬ್ ಅವರಿಗೆ ಮಾಡುವ ಅವಮಾನ ಎಂದು ರಾವತ್ ಹೇಳಿದ್ದಾರೆ.