ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿಗೂ ಮುನ್ನ ಇಸ್ಲಾಮಿಕ್ ಎಮಿರೇಟ್ ಮಾನ್ಯತೆಗೆ ತಾಲಿಬಾನ್ ಆಗ್ರಹ
ಅಮೀರ್ ಖಾನ್ ಮುತ್ತಖಿ (Photo: X/@WakeelMubariz)
ಹೊಸದಿಲ್ಲಿ: ಭಾರತದ ಜತೆಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ತಾಲಿಬಾನ್ ಪ್ರಯತ್ನ ಮುಂದುವರಿಸಿದೆ. ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಮೀರ್ ಖಾನ್ ಮುತ್ತಖಿ ಅವರು ಶನಿವಾರ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ತಾಲಿಬಾನ್ ನೇತೃತ್ವದ ಇಸ್ಲಾಮಿಕ್ ಎಮಿರೇಟ್ ಗೆ ಮಾನ್ಯತೆ ನೀಡುವಂತೆ ಭಾರತವನ್ನು ಒತ್ತಾಯಿಸಲಿದೆ ಎಂದು ವರದಿಯಾಗಿದೆ.
ಭಾರತಕ್ಕೆ ಆರು ದಿನಗಳ ಭೇಟಿ ನೀಡುವ ಸಲುವಾಗಿ ಗುರುವಾರ ಮುತ್ತಖಿ ಹೊಸದಿಲ್ಲಿಗೆ ಆಗಮಿಸಿದ್ದು, ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡದಿದ್ದರೂ, ಭಾರತದ ಜತೆಗೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಸಂಬಂಧವನ್ನು ಸುಧಾರಿಸುವುದು, ಕಾಬೂಲ್ ಜತೆ ಜನ-ಜನರ ನಡುವಿನ ಸಂಪರ್ಕ ಸಾಧಿಸುವುದು ಮತ್ತಿತರ ವಿಷಯಗಳ ಜತೆ ಒಪ್ಪಂದಕ್ಕೆ ಬರುವ ನಿರೀಕ್ಷೆ ಇದೆ.
ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಗೆ ಮಾನ್ಯತೆ ನೀಡುವ ಮೂಲಕ ಉಭಯ ದೇಶಗಳ ನಡುವಿನ ಸಂಬಂಧವನ್ನು ಮೇಲ್ಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ ಮುತ್ತಖಿ ಭೇಟಿ ಮಹತ್ವದ ಹೆಜ್ಜೆ ಎಂದು ಉನ್ನತ ತಾಲಿಬಾನ್ ನಾಯಕರೊಬ್ಬರು ವಿವರಿಸಿದ್ದಾರೆ.
"ನಮ್ಮ ವಿದೇಶಾಂಗ ಸಚಿವರು ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ್ದು, ಇದು ಮಹತ್ವದ ಹೆಜ್ಜೆ. ಇದು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಹಂತಕ್ಕೆ ಚಾಲನೆ ನೀಡುತ್ತದೆ ಎಂಬ ನಿರೀಕ್ಷೆ ನಮ್ಮದು. ಈ ಭೇಟಿಯ ವೇಳೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಸಾಧ್ಯತೆಯನ್ನು ಪರಿಶೀಲಿಸಲಾಗುವದು" ಎಂದು ತಾಲಿಬಾನ್ ರಾಜಕೀಯ ಕಚೇರಿ ಮತ್ತು ಖತರ್ ನಲ್ಲಿ ಅಫ್ಘಾನ್ ರಾಯಭಾರಿಯಾಗಿರುವ ಸುಹೈಲ್ ಶಹೀನ್ ಹೇಳಿದ್ದಾರೆ.
ಇಐಎ ಸರ್ಕಾರಕ್ಕೆ ಮಾನ್ಯತೆ ನೀಡುವ ಮೂಲಕ ರಾಜತಾಂತ್ರಿಕ ಸಂಬಂಧದ ಮಟ್ಟವನ್ನು ಎತ್ತರಿಸಲು ಉಭಯ ದೇಶಗಳ ನಾಯಕರಿಗೆ ಇದು ಸುಸಮಯ; ಈ ಮೂಲಕ ದ್ವಿಪಕ್ಷೀಯ ಸಹಕಾರ ಸುಧಾರಣೆಮತ್ತು ವಿವಿಧ ಕ್ಷೇತ್ರಗಳಲ್ಲಿ ಸಂಬಂಧವನ್ನು ವಿಸ್ತರಿಸಲು ಅನುವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.