ಸೀಟ್ 11ಎದಲ್ಲಿ ಕುಳಿತಿದ್ದು, ಸಾವನ್ನು ಗೆದ್ದ ಇಬ್ಬರು ಪ್ರಯಾಣಿಕರು!
PC : NDTV
ಹೊಸದಿಲ್ಲಿ: ಸುಮಾರು ಮೂರು ದಶಕಗಳ ಅಂತರದಲ್ಲಿ ವಿಮಾನ ಅಪಘಾತಗಳಿಂದ ಬದುಕುಳಿದ ಇಬ್ಬರು ಪ್ರಯಾಣಿಕರು ಒಂದೇ ಸಂಖ್ಯೆಯ 11ಎ ಆಸನವನ್ನು ಹಂಚಿಕೊಂಡಿದ್ದರು. ಮೊದಲ ಅಪಘಾತ 1998ರಲ್ಲಿ ಥೈಲಂಡ್ ನಲ್ಲಿ ಸಂಭವಿಸಿದ್ದರೆ, ಎರಡನೇ ಅಪಘಾತ ಗುರುವಾರ ಭಾರತದಲ್ಲಿ ಸಂಭವಿಸಿದೆ. 11ಎ ಸೀಟಿನಲ್ಲಿ ಕುಳಿತಿದ್ದ ಇಬ್ಬರೂ ಪ್ರಯಾಣಕರು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ.
ಗುರುವಾರ ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದ ಬ್ರಿಟಿಷ್ ಪ್ರಜೆ ವಿಶ್ಬಾಸ್ ಕುಮಾರ್ ರಮೇಶ್ ಬದುಕುಳಿದಿರುವ ಏಕೈಕ ಪ್ರಯಾಣಿಕರಾಗಿದ್ದು, ಅವರು 11ಎ ಆಸನದಲ್ಲಿ ಕುಳಿತಿದ್ದರು.
ಥೈಲಂಡ್‌ನ ನಟ-ಗಾಯಕ ಜೇಮ್ಸ್ ರುಂಗ್‌ಸಾಕ್ ಲೊಯ್ಚುಸಾಕ್(47) ಈಗ ಬದುಕುಳಿದಿರುವ ರಮೇಶ್ ತಾನು ಕುಳಿತಿದ್ದ ಸೀಟಿನಲ್ಲಿಯೇ ಇದ್ದರು ಎನ್ನುವುದನ್ನು ತಿಳಿದು ದಿಗ್ಭ್ರಮೆಗೊಂಡಿದ್ದಾರೆ.
ಥಾಯ್ ಏರ್‌ವೇಸ್‌ಗೆ ಸೇರಿದ್ದ ವಿಮಾನ ಬ್ಯಾಂಕಾಕ್ ನಿಂದ ಟೇಕ್‌ಆಫ್ ಆಗಿದ್ದು, ದಕ್ಷಿಣ ಥೈಲಂಡ್‌ನ ಸುರತ್ ಥಾನಿ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿತ್ತು. ವಿಮಾನದಲ್ಲಿದ್ದ 146 ಪ್ರಯಾಣಿಕರ ಪೈಕಿ 101 ಜನರು ಮೃತಪಟ್ಟಿದ್ದು, ಬದುಕುಳಿದವರಲ್ಲಿ ಜೇಮ್ಸ್ ಒಬ್ಬರಾಗಿದ್ದರು,ಅವರು 11ಎ ಸೀಟ್‌ನಲ್ಲಿ ಕುಳಿತಿದ್ದರು.
ರಮೇಶ್ ಬದುಕುಳಿದ ಬಗ್ಗೆ ಮಾಹಿತಿ ತಿಳಿದ ಜೇಮ್ಸ್ ಈ ಅಚ್ಚರಿಯ ಕಾಕತಾಳೀಯತೆಯನ್ನು ಗಮನಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಥಾಯ್ ದುರಂತದಲ್ಲಿ ಹಲವರು ಬದುಕುಳಿದಿದ್ದರು, ಇದಕ್ಕೆ ವ್ಯತಿರಿಕ್ತವಾಗಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ರಮೇಶ್ ಮಾತ್ರ ಬದುಕುಳಿದಿದ್ದಾರೆ. ಅಲ್ಲದೆ ಥಾಯ್ ವಿಮಾನ ಏರ್‌ಬಸ್ ಎ 310 ಆಗಿದ್ದರೆ ಏರ್‌ಇಂಡಿಯಾದ ವಿಮಾನ ಬೋಯಿಂಗ್ 787-8 ಡ್ರೀಮ್‌ಲೈನರ್ ಆಗಿತ್ತು. ವಿನ್ಯಾಸ,ಗಾತ್ರ ಮತ್ತು 11ಎ ಸೀಟ್‌ನ ಸ್ಥಾನ ಎರಡೂ ವಿಮಾನಗಳಲ್ಲಿ ಭಿನ್ನವಾಗಿತ್ತು. ಹೀಗಾಗಿ ಇದು ಕೇವಲ ಕಾಕತಾಳೀಯವಷ್ಟೇ.