ಅಹಮದಾಬಾದ್ ವಿಮಾನ ದುರಂತ | 25 ಲಕ್ಷ ರೂ. ಮಧ್ಯಂತರ ಪರಿಹಾರ ಪಾವತಿ ಆರಂಭಿಸಿದ ಏರ್ ಇಂಡಿಯಾ
PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಹಾಗೂ ಬದುಕುಳಿದವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ಪಾವತಿಸಲು ಏರ್ ಇಂಡಿಯಾ ಆರಂಭಿಸಿದೆ.
ಇದುವರೆಗೆ ಮೂರು ಕುಟುಂಬಗಳು ಮಧ್ಯಂತರ ಪರಿಹಾರವನ್ನು ಸ್ವೀಕರಿಸಿವೆ. ಉಳಿದ ಕುಟುಂಬಗಳಿಗೆ ಪರಿಹಾರ ಪಾವತಿಸುವ ಪ್ರಕ್ರಿಯೆ ಮುಂದುವರಿದಿದೆ. ಜೂನ್ 20ರಿಂದ ಪರಿಹಾರ ಪಾವತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶನಿವಾರ ನೀಡಿದ ಹೇಳಿಕೆಯಲ್ಲಿ ಏರ್ ಇಂಡಿಯಾ ದೃಢಪಡಿಸಿದೆ.
ಏರ್ ಇಂಡಿಯಾದ ಮಾತೃ ಸಂಸ್ಥೆಯಾದ ಟಾಟಾ ಸನ್ಸ್ ಈ ಹಿಂದೆ ಘೋಷಿಸಿದ 1 ಕೋ.ರೂ. ಪರಿಹಾರದೊಂದಿಗೆ ಈ ಮಧ್ಯಂತರ ಪರಿಹಾರ ಹೆಚ್ಚುವರಿಯಾಗಿದೆ.
ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಏರ್ ಇಂಡಿಯಾ ಅಹ್ಮದಾಬಾದ್‌ನಲ್ಲಿ ತರಬೇತು ಪಡೆದ ಮನಃಶಾಸ್ತ್ರಜ್ಞರು ಹಾಗೂ ವೈದ್ಯರ ತಂಡವನ್ನು ನಿಯೋಜಿಸಿದೆ. ದಾದಿಯರು ಹಾಗೂ ಫಾರ್ಮಾಸಿಸ್ಟ್‌ರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ತಂಡ ಸಂತ್ರಸ್ತರ ತುರ್ತು ಆರೋಗ್ಯ ಅಗತ್ಯತೆಗಳನ್ನು ಪೂರೈಸಲಿದೆ.
ಜೂನ್ 15ರಿಂದ ಕಾರ್ಯನಿರ್ವಹಿಸುತ್ತಿರುವ ಹೆಲ್ಪ್ ಡೆಸ್ಕ್ ದಾಖಲೀಕರಣ ಹಾಗೂ ಹಕ್ಕು ಪ್ರತಿಪಾದನೆ ಪ್ರಕ್ರಿಯೆ ಮೂಲಕ ಕುಟುಂಬಗಳಿಗೆ ನೆರವು ನೀಡುತ್ತಿದೆ. ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಏಕ ಗವಾಕ್ಷಿ ವ್ಯವಸ್ಥೆ ನೆರವು ನೀಡುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.