ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಏರ್ ಇಂಡಿಯಾಗೆ DGCA ನೋಟಿಸ್
PC : PTI
ಹೊಸದಿಲ್ಲಿ: ಸಿಬ್ಬಂದಿ ನಿರ್ವಹಣೆ ಮತ್ತು ತರಬೇತಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನ ಯಾನ ನಿರ್ದೇಶನಾಲಯ(DGCA)ವು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಜೂನ್ 12ರಂದು ಗುಜರಾತ್ ನ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಬೋಯಿಂಗ್ ಡ್ರೀಮ್ ಲೈನರ್ 787-8 ವಿಮಾನವು ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ಈ ಘಟನೆಯಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಸೇರಿದಂತೆ ಒಟ್ಟು 260 ಮಂದಿ ಮೃತಪಟ್ಟಿದ್ದರು. ಆದರೆ, ಕೇವಲ ಓರ್ವ ಪ್ರಯಾಣಿಕರು ಮಾತ್ರ ಪವಾಡಸದೃಶ ರೀತಿಯಲ್ಲಿ ಈ ಅಪಘಾತದಲ್ಲಿ ಪಾರಾಗಿದ್ದರು.
ಈ ಘಟನೆಯ ಬೆನ್ನಲ್ಲೇ ಈ ವರ್ಷ ಮತ್ತು ಕಳೆದ ವರ್ಷ ಸಂಭವಿಸಿದ ತನ್ನ ಸಂಸ್ಥೆಯ ವಿಮಾನ ಅಪಘಾತಗಳ ಕುರಿತು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ನಾಗರಿಕ ವಿಮಾನ ಯಾನ ನಿರ್ದೇಶನಾಲಯಕ್ಕೆ ಸ್ವಯಂಪ್ರೇರಿತವಾಗಿ ವರದಿ ಸಲ್ಲಿಸಿತ್ತು.
ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಈ ಸ್ವಯಂಪ್ರೇರಿತ ವರದಿಯ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ, “ಜುಲೈ 23ರಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಲ್ಕು ನೋಟಿಸ್ ಗಳನ್ನು ಜಾರಿಗೊಳಿಸಲಾಗಿತ್ತು. ಹೀಗಿದ್ದೂ, ಸುರಕ್ಷತಾ ಮಾನದಂಡಗಳನ್ನು ಪಾಲಿಸುವಲ್ಲಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ವಿಫಲವಾಗಿದೆ. ಹೀಗಾಗಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.
ಇದೀಗ ಹೊಸ ನೋಟಿಸ್ ನ ಪ್ರಕಾರ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ತನ್ನ ಪೈಲಟ್ ಗಳಿಗೆ ಕಡ್ಡಾಯ ವಿಶ್ರಾಂತಿ ನೀಡದಿರುವುದು, ಸಿಮ್ಯುಲೇಟರ್ ತರಬೇತಿ ಅಗತ್ಯತೆಗಳನ್ನು ಪಾಲನೆ ಮಾಡದಿರುವುದು, ತರಬೇತಿ ಕೊರತೆ, ಸಾಕಷ್ಟು ಕ್ಯಾಬಿನ್ ಸಿಬ್ಬಂದಿಗಳಿಲ್ಲದೆ ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳಲ್ಲಿ ಹಾರಾಟ ನಡೆಸಿರುವುದು ಸೇರಿದಂತೆ ಒಟ್ಟು 29 ನಿಯಮಗಳನ್ನು ಉಲ್ಲಂಘಿಸಿದೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಹೇಳಿದೆ.
ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿಗೊಳಿಸಿದರೂ ಕೂಡಾ ಸಿಬ್ಬಂದಿಯ ನಿರ್ವಹಣೆ ಹಾಗೂ ತರಬೇತಿಯಲ್ಲಿನ ವ್ಯವಸ್ಥಿತ ಲೋಪಗಳು ಬಗೆಹರಿಯದೆ ಉಳಿದಿವೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಆರೋಪಿಸಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ, “ನಾವು ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಬದ್ಧರಾಗಿದ್ದೇವೆ” ಎಂದು ಸಮರ್ಥಿಸಿಕೊಂಡಿದೆ.