×
Ad

ಏರ್ ಇಂಡಿಯಾ ವಿಮಾನ ಅಪಘಾತ | ಎಲ್ಲ ಕಳೇಬರಗಳನ್ನೂ ವೃತ್ತಿಪರವಾಗಿ ನಿರ್ವಹಿಸಲಾಗಿದೆ: ಡೈಲಿ ಮೇಲ್ ವರದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ

Update: 2025-07-23 19:51 IST

PC : PTI

ಹೊಸದಿಲ್ಲಿ: ಜೂನ್ 12ರಂದು ಅಹಮದಾಬಾದ್‌ ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕಳೇಬರಗಳನ್ನು ತಪ್ಪಾಗಿ ಗುರುತಿಸಲಾಗಿದೆ ಎಂಬ ಡೈಲಿ ಮೇಲ್ ವರದಿಗೆ ಬುಧವಾರ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಎಲ್ಲ ಕಳೇಬರಗಳನ್ನೂ ಅತ್ಯುನ್ನತ ವೃತ್ತಿಪರತೆ ಹಾಗೂ ಮೃತರಿಗೆ ಸೂಕ್ತ ಗೌರವ ನೀಡುವ ಮೂಲಕ ನಿಭಾಯಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಕಳವಳಗಳನ್ನು ಪರಿಹರಿಸಲು ನಾವು ಬ್ರಿಟನ್ ಪ್ರಾಧಿಕಾರಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದೆ.

ಇದಕ್ಕೂ ಮುನ್ನ, ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವರದಿ ಮಾಡಿದ್ದ ಬ್ರಿಟನ್ ಮೂಲದ 'ಡೈಲಿ ಮೇಲ್' ಪತ್ರಿಕೆ, "ಮೃತರನ್ನು ತಪ್ಪಾಗಿ ಗುರುತಿಸಿರುವ ಎರಡು ನಿದರ್ಶನಗಳು ಬೆಳಕಿಗೆ ಬಂದಿದ್ದು, ಇಂತಹ ಇನ್ನೂ ಅನೇಕ ಪ್ರಕರಣಗಳಿವೆ ಎಂದು ಶಂಕಿಸಲಾಗಿದೆ" ಎಂದು ಸಂಶಯ ವ್ಯಕ್ತಪಡಿಸಿತ್ತು.

ಈ ಸುದ್ದಿ ವರದಿಯ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ನಾವು ಈ ವರದಿಯನ್ನು ನೋಡಿದ್ದು, ಈ ಕಳವಳ ಸಂಗತಿಯನ್ನು ನಮ್ಮ ಗಮನಕ್ಕೆ ತಂದಾಗಿನಿಂದ, ನಾವು ಬ್ರಿಟನ್ ಪ್ರಾಧಿಕಾರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಈ ವಿಮಾನ ದುರ್ಘಟನೆಯಲ್ಲಿ ಸಂಬಂಧಿತ ಪ್ರಾಧಿಕಾರಗಳು ಮೃತರ ಗುರುತನ್ನು ಪತ್ತೆ ಹಚ್ಚಲು ಈಗಾಗಲೇ ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳು ಹಾಗೂ ತಾಂತ್ರಿಕ ಅಗತ್ಯಗಳನುಸಾರ ಕಾರ್ಯನಿರ್ವಹಿಸಿವೆ" ಎಂದೂ ಅವರು ಹೇಳಿದ್ದಾರೆ.

ಜೂನ್ 12ರಂದು ಅಹಮದಾಬಾದ್‌ ನಿಂದ ಬ್ರಿಟನ್‌ ಗೆ ತೆರಳುತ್ತಿದ್ದ ಏರ್ ಇಂಡಿಯಾ 787-8 ಡ್ರೀಮ್ ಲೈನರ್ ಬೋಯಿಂಗ್ ವಿಮಾನ ಸಂಖ್ಯೆ ಎಐ171, ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ವಿದ್ಯಾರ್ಥಿ ನಿಲಯದ ಕಟ್ಟಡವೊಂದರ ಮೇಲೆ ಪತನಗೊಂಡಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಇತರೆ 19 ಮಂದಿ ಸೇರಿದಂತೆ ಒಟ್ಟು 260 ಮೃತಪಟ್ಟಿದ್ದರು. ಕೇವಲ ಓರ್ವ ಪ್ರಯಾಣಿಕ ಮಾತ್ರ ಈ ಭೀಕರ ದುರ್ಘಟನೆಯಲ್ಲಿ ಪಾರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News