ಪ್ರಯಾಣಿಕನ ಮೇಲೆ ಹಲ್ಲೆ ಪ್ರಕರಣ: ಏರ್ ಇಂಡಿಯಾ ಪೈಲಟ್ ಬಂಧನ
ಏರ್ ಇಂಡಿಯಾ ಪೈಲಟ್ ವೀರೇಂದ್ರ ಸೇಜ್ವಾಲ್ (Photo: indiatoday.in)
ಹೊಸದಿಲ್ಲಿ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಏರ್ ಇಂಡಿಯಾ ಪೈಲಟ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 19ರಂದು ಟರ್ಮಿನಲ್ 1ರ ಭದ್ರತಾ ತಪಾಸಣಾ ಕೇಂದ್ರದ ಬಳಿ ನಡೆದಿದ್ದ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೈಲಟ್ ವೀರೇಂದ್ರ ಸೇಜ್ವಾಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಏರ್ ಇಂಡಿಯಾ ಪೈಲಟ್ ವೀರೇಂದ್ರ ಸೇಜ್ವಾಲ್, ಪ್ರಯಾಣಿಕ ಅಂಕಿತ್ ದಿವಾನ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಅವರನ್ನು ತೀವ್ರ ವಿಚಾರಣೆ ನಡೆಸಿದ ಬಳಿಕ, ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ತನಗಾದ ಕಹಿ ಅನುಭವವನ್ನು ಸಂತ್ರಸ್ತ ಪ್ರಯಾಣಿಕ ಅಂಕಿತ್ ದಿವಾನ್ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ, ತಮ್ಮ ಮುಖದಲ್ಲಿ ರಕ್ತ ಬರುತ್ತಿರುವ ಹಾಗೂ ಪೈಲಟ್ ಫೋಟೊವನ್ನೂ ಸಹ ಹಂಚಿಕೊಂಡಿದ್ದ.
“ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಸಂಬಂಧಪಟ್ಟ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ತನಿಖಾ ವರದಿಯನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ವಿಮಾನ ಯಾನ ಸಂಸ್ಥೆ ಭರವಸೆ ನೀಡಿತ್ತು.
ಡಿಸೆಂಬರ್ 19ರಂದು ನಡೆದಿದ್ದ ಹಲ್ಲೆ ಘಟನೆಯ ಕುರಿತು ವಿವರಿಸಿದ್ದ ಅಂಕಿತ್ ದಿವಾನ್, “ನಾವು ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ನಿಂತಿದ್ದೆವು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಸಿಬ್ಬಂದಿ ಬಳಸುವ ಭದ್ರತಾ ತಪಾಸಣೆ ನಿಯಮಗಳನ್ನು ಅನುಸರಿಸುವಂತೆ ನಮಗೆ ಮಾರ್ಗದರ್ಶನ ನೀಡಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿ ನಮ್ಮ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ವೀರೇಂದ್ರ ಸೇಜ್ವಾಲ್ ನನ್ನನ್ನು ‘ಅಶಿಕ್ಷಿತ’ ಎಂದು ನಿಂದಿಸಿದರು. ಆಗ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಪೈಲಟ್ ವೀರೇಂದ್ರ ಸೇಜ್ವಾಲ್ ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಹೇಳಿದ್ದರು.