ಏರ್ ಇಂಡಿಯಾ ವಿಮಾನ ಅಪಘಾತ | ಸೀಮಂತ ಶಾಸ್ತ್ರಕ್ಕೆ ಭಾರತಕ್ಕೆ ಬಂದಿದ್ದ ದಂಪತಿಗಳ ದಾರುಣ ಸಾವು!
PC : NDTV
ಅಹಮದಾಬಾದ್: ಸೀಮಂತ ಶಾಸ್ತ್ರಕ್ಕೆ ಭಾರತಕ್ಕೆ ಬಂದಿದ್ದ ದಂಪತಿಗಳು ಜೂನ್ 12ರಂದು ನಡೆದ ಭೀಕರ ಏರ್ ಇಂಡಿಯಾ ವಿಮಾನದ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವೈಭವ್ ಪಟೇಲ್ (29) ಹಾಗೂ ಜಿನಲ್ ಗೋಸ್ವಾಮಿ (27) ಶೀಘ್ರದಲ್ಲೇ ತಮ್ಮ ಪ್ರಥಮ ಮಗುವಿನ ಪೋಷಕರಾಗುವ ಸನಿಹದಲ್ಲಿದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದ ಜಿನಲ್ ಗೋಸ್ವಾಮಿ, ಇನ್ನೆರಡು ತಿಂಗಳು ಕಳೆದಿದ್ದರೆ, ಕುಟುಂಬದ ಸದಸ್ಯರಲ್ಲಿ ಸಂತೋಷ ಹಾಗೂ ರೋಮಾಂಚನಕ್ಕೆ ಕಾರಣವಾಗಿರುತ್ತಿದ್ದರು.
ಕುಟುಂಬದ ಹೊಸ ಸದಸ್ಯನ ಆಗಮನವನ್ನು ಸಂಭ್ರಮಿಸಲು ಹಾಗೂ ಸ್ವಾಗತಿಸಲು ದಂಪತಿಗಳ ಕುಟುಂಬದ ಸದಸ್ಯರು ಇನ್ನಷ್ಟು ಕಾಯುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ, ನೂತನ ಪುಟ್ಟ ಸದಸ್ಯನ ಆಗಮನಕ್ಕೆ ತೊಟ್ಟಿಲು ಸಿದ್ಧಪಡಿಸಬೇಕು ಎಂಬ ಆಗ್ರಹ ಅವರಲ್ಲಿ ಕೇಳಿ ಬಂದಿತ್ತು. ಇದರ ಬೆನ್ನಿಗೇ, ಸಾಂಪ್ರದಾಯಿಕ ಆಚರಣೆ ಹಾಗೂ ಆತ್ಮೀಯ ಸಮಾರಂಭದ ಮೂಲಕ, ಜಿನಲ್ ರ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆದರೆ, ಅವರ ಸಂಭ್ರಮವೆಲ್ಲ ಕೆಲವೇ ದಿನಗಳಲ್ಲಿ ಶೋಕಕ್ಕೆ ತಿರುಗಿತ್ತು. ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ 274 ಮಂದಿ ದುರ್ದೈವಿಗಳ ಪೈಕಿ ಈ ದಂಪತಿಗಳೂ ಸೇರಿದ್ದರು. ಧೋಲ್ಕಾ ತಾಲ್ಲೂಕಿನ ಕೆಲಿಯಾ ವಸ್ಮಾ ಗ್ರಾಮದ ನಿವಾಸಿಗಳಾಗಿದ್ದ ಈ ದಂಪತಿಗಳು ಲಂಡನ್ ನಲ್ಲಿ ವಾಸಿಸುತ್ತಿದ್ದರು. ಇತ್ತೀಚಿಗೆ ಅವರು ಹ್ಯಾಂಪ್ ಶೈರ್ ನ ಸೌತಾಂಪ್ಟನ್ ಗೂ ಸ್ಥಳಾಂತರಗೊಂಡಿದ್ದರು. ಹೀಗಾಗಿ, ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಲು ಅಹಮದಾಬಾದ್ ಗೆ ಆಗಮಿಸಿದ್ದ ಈ ದಂಪತಿಗಳು, ಜೂನ್ 12ರಂದು ಟೇಕಾಫ್ ಆಗುತ್ತಿದ್ದಂತೆಯೇ ಅಪಘಾತಕ್ಕೀಡಾಗಿದ್ದ ಏರ್ ಇಂಡಿಯಾ 171 ವಿಮಾನದಲ್ಲಿ ಲಂಡನ್ ಗೆ ಮರುಪ್ರಯಾಣ ಬೆಳೆಸಿದ್ದರು.
ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಗಳನ್ನು ಒಳಗೊಂಡಂತೆ ಸಾಂಪ್ರದಾಯಿಕ ಸಮಾರಂಭ ಹಾಗೂ ಹಾರ್ದಿಕ ಭೇಟಿಯೊಂದಿಗೆ ಜೂನ್ 2ರಂದು ಜಿನಲ್ ಳ ಸೀಮಂತ ಶಾಸ್ತ್ರವನ್ನು ನಡೆಸಲಾಗಿತ್ತು ಎಂದು ಈ ದಂಪತಿಗಳ ಎರಡೂ ಕುಟುಂಬಗಳಿಗೆ ನಿಕಟವಾಗಿರುವ ಸ್ನೇಹಿತರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ. ಎಂದೂ ಮುಗಿಯದ ಈ ಉದ್ವೇಗದ ದೀರ್ಘ ದಿನಗಳು ಶೀಘ್ರದಲ್ಲೇ ಅಂತ್ಯಗೊಳ್ಳಬೇಕಿತ್ತು. ಆದರೆ, ವಿಧಿಯ ತೀರ್ಮಾನವೇ ಬೇರೆಯಾಗಿತ್ತು.
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ದಾರುಣವಾಗಿ ಮಡಿದ ಈ ದಂಪತಿಗಳ ಅಂತ್ಯಕ್ರಿಯೆಯನ್ನು ಸೋಮವಾರ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ವೇಳೆ, ದಂಪತಿಗಳ ಸಂಬಂಧಿಕರು ಹಾಗೂ ಸ್ನೇಹಿತರ ಗೋಳು ಮತ್ತು ಆಕ್ರಂದನ ಮುಗಿಲು ಮುಟ್ಟಿ, ನೋಡುಗರ ಕಣ್ಣುಗಳನ್ನು ಆರ್ದ್ರಗೊಳಿಸಿದ್ದವು.
ಜೂನ್ 12ರಂದು ನಡೆದ ಈ ಭೀಕರ ವಿಮಾನ ದುರಂತದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್ ಗಳು ಹಾಗೂ 10 ಮಂದಿ ವಿಮಾನ ಸಿಬ್ಬಂದಿಗಳು ಸೇರಿದಂತೆ ಒಟ್ಟು 242 ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ದುರಂತಕ್ಕೀಡಾದ ಪ್ರದೇಶದಲ್ಲಿದ್ದ ಹಲವು ಮಂದಿಯೂ ಅಸು ನೀಗಿದ್ದರು.