ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಬ್ಯಾಗ್ ಅನ್ನು ಮರಳಿ ಪಡೆಯಲು ತಿಂಗಳ ಕಾಲ ಅಲೆದಾಡಿದ ಏರ್ ಇಂಡಿಯಾ ಪ್ರಯಾಣಿಕ!
Photo: X/@praaatiiik
ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಬ್ಯಾಗ್ ಅನ್ನು ಮರಳಿ ಪಡೆಯಲು ಒಂದು ತಿಂಗಳ ಕಾಲ ಅಲೆದಾಡಿದರೂ, ಅದು ಲಭ್ಯವಾಗಿಲ್ಲ ಎಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಯೂಟ್ಯೂಬರ್ ಪ್ರತೀಕ್ ರಾಯ್ ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
“ನಾನು ದಿಲ್ಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವಾಗ ನನ್ನ ಬ್ಯಾಗ್ ಕಳೆದುಕೊಂಡಿದ್ದೆ. ನನ್ನ ಬ್ಯಾಗ್ ಬೆಂಗಳೂರಿನಲ್ಲಿದೆ ಎಂದು ಏರ್ ಇಂಡಿಯಾ ಆ್ಯಪ್ ಮಾಹಿತಿ ನೀಡಿತ್ತು. ಹೀಗಾಗಿ, ಅದು ಇನ್ನೊಂದು ದಿನದಲ್ಲಿ ನನಗೆ ತಲುಪಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ, ಎರಡು ದಿನಗಳ ನಂತರ, ಘಟನೆಯ ಕುರಿತು ಅಂತರ್ಜಾಲದಲ್ಲಿ ನನ್ನ ಅಸಮಾಧಾನವನ್ನು ಹೊರ ಹಾಕಿದ್ದೆ” ಎಂದು ತಮ್ಮ Tech Wiser ಯೂಟ್ಯೂಬ್ ವಾಹಿನಿಯಿಂದ ಜನಪ್ರಿಯರಾಗಿರುವ ಯೂಟ್ಯೂಬರ್ ಪ್ರತೀಕ್ ರಾಯ್ ಬರೆದುಕೊಂಡಿದ್ದಾರೆ.
ನಂತರ, ಪ್ರತೀಕ್ ರಾಯ್ ರನ್ನು ಸಂಪರ್ಕಿಸಿದ್ದ ಏರ್ ಇಂಡಿಯಾ ಗ್ರಾಹಕರ ಸೇವಾ ಸಿಬ್ಬಂದಿಗಳು, ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಹಾಗೂ ಇನ್ನೊಂದು ವಾರದಲ್ಲಿ ನಿಮಗೆ ಬ್ಯಾಗ್ ಅನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಕೂಡಾ ಹುಸಿಯಾಗಿದೆ.
ಈ ಕುರಿತು ವಿಚಾರಿಸಿದಾಗ, ಅವರ ಬ್ಯಾಗ್ ದಿಲ್ಲಿಯಿಂದ ನಿರ್ಗಮಿಸಿಯೇ ಇಲ್ಲ ಎಂದು ತಿಳಿದು ಬಂದಿದೆ. ಐದು ದಿನಗಳಾದರೂ ತಮ್ಮ ಬ್ಯಾಗ್ ತಲುಪದೇ ಇದ್ದುದರಿಂದ, ಅವರೇ ಖುದ್ದಾಗಿ ಅದನ್ನು ಪಡೆಯಲು ದಿಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.
ಈ ಕುರಿತು ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದಾಗ, ವಿಮಾನ ನಿಲ್ದಾಣದ ಸಿಬ್ಬಂದಿಗಳು ತನ್ನದು ಎಂದು ಭಾವಿಸಿದ್ದ ಬ್ಯಾಗ್, ತನ್ನದಲ್ಲ ಎಂಬುದು ಪ್ರತೀಕ್ ರಾಯ್ ಗೆ ಮನವರಿಕೆಯಾಗಿದೆ. ಇದುವರೆಗೂ ಅವರ ಬ್ಯಾಗ್ ಪತ್ತೆಯಾಗಿಲ್ಲ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರತೀಕ್ ರಾಯ್, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಭಯಾನಕ ಸೇವೆಯ ಅನುಭವದ ಕುರಿತು ವಿಸ್ತೃತವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ತನ್ನ ಕಳಪೆ ಸೇವೆಗಾಗಿ ಪದೇ ಪದೇ ಸುದ್ದಿಯಾಗುತ್ತಿದೆ. ಕೇಂದ್ರ ಸಚಿವ ಶಿವರಾಜ್ ಚೌಹಾಣ್ ರಿಂದ ಹಿಡಿದು ಬಿಜೆಪಿ ನಾಯಕ ಜೈವೀರ್ ಶೆರ್ಗಿಲ್ ವರೆಗಿನ ಗಣ್ಯರು ವಿಮಾನ ಯಾನ ಸಂಸ್ಥೆಯ ಕಳಪೆ ಸೇವೆಯ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈ ಸಾಲಿಗೆ ಯೂಟ್ಯೂಬರ್ ಪ್ರತೀಕ್ ರಾಯ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.