ಪತನದ ವೇಳೆ ಬೋಯಿಂಗ್ 787-8 ವಿಮಾನ ಹಾರಾಟ ಮುಂದುವರಿಸಿತ್ತು ಎಂದು ತೋರಿಸಿದ ಏರ್‌ಇಂಡಿಯಾ ಪೈಲಟ್‌ಗಳು ನಡೆಸಿದ ಸಿಮ್ಯುಲೇಟರ್ ಪರೀಕ್ಷೆ
PC ; @airindia
ಮುಂಬೈ: ಅಹ್ಮದಾಬಾದ್‌ನಲ್ಲಿ ಪತನದ ವೇಳೆ ಬೋಯಿಂಗ್ 787-8 ವಿಮಾನವು ಹಾರಾಟವನ್ನು ಮುಂದುವರಿಸಿತ್ತು ಎನ್ನುವುದನ್ನು ಏರ್ ಇಂಡಿಯಾದ ಹಿರಿಯ ಪೈಲಟ್‌ಗಳ ಗುಂಪೊಂದು ನಡೆಸಿದ ಸಿಮ್ಯುಲೇಟರ್ ಪರೀಕ್ಷೆಯು ತೋರಿಸಿದೆ. ಇದಕ್ಕಾಗಿ ಪೈಲಟ್‌ಗಳು ಸಿಮ್ಯುಲೇಟರ್‌ಗಳಲ್ಲಿ ಹೆಚ್ಚಿನ ತೂಕ ಮತ್ತು ತಾಪಮಾನದಂತಹ ಕೆಲವು ಪ್ರತಿಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದರು,ಲ್ಯಾಂಡಿಂಗ್ ಗೇರನ್ನು ಕೆಳಮುಖವಾಗಿ ಇರಿಸಲಾಗಿತ್ತು ಮತ್ತು 50 ಅಡಿ ಎತ್ತರದಲ್ಲಿ ವಿಂಗ್ ಫ್ಲಾಪ್‌ಗಳನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.
ಏರ್ ಇಂಡಿಯಾದ ಆವರಣದಲ್ಲಿ ಸಿಮ್ಯುಲೇಟರ್ ತರಬೇತಿ ಅವಧಿಯಲ್ಲಿ ಬೋಯಿಂಗ್ 787 ವಿಮಾನಗಳ ತರಬೇತಿದಾರರು ಸಿಮ್ಯುಲೇಟರ್ ಪರೀಕ್ಷೆಯನ್ನು ನಡೆಸಿದ್ದರು.
ಈ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ,ಪೈಲಟ್‌ಗಳು ತಾವಾಗಿಯೇ ಸಿಮ್ಯುಲೇಟರ್ ಪರೀಕ್ಷೆಯನ್ನು ನಡೆಸಿದ್ದು,ಅದರಲ್ಲಿ ಸಂಸ್ಥೆಯ ಯಾವುದೇ ಪಾತ್ರವಿರಲಿಲ್ಲ ಎಂದು ತಿಳಿಸಿದೆ.
ಜೂ.12ರಂದು ಅಹ್ಮದಾಬಾದ್‌ನಲ್ಲಿ 260ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಭವನೀಯ ಕಾರಣಗಳ ಕುರಿತು ಆರಂಭದಲ್ಲಿ ಕೇಳಿ ಬರುತ್ತಿದ್ದ ವಿವಿಧ ಸಿದ್ಧಾಂತಗಳಲ್ಲಿ ಪೈಲಟ್ ಹಿಂದೆಗೆದುಕೊಂಡ ಫ್ಲಾಪ್‌ಗಳು ಮತ್ತು ಕೆಳಮುಖವಾಗಿದ್ದ ಲ್ಯಾಂಡಿಂಗ್ ಗೇರ್‌ನೊಂದಿಗೆ ವಿಮಾನವನ್ನು ಹಾರಿಸಿದ್ದರು ಎನ್ನುವುದೂ ಒಂದಾಗಿತ್ತು.
ಪ್ರತಿಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಲಾಗಿತ್ತಾದರೂ ಸಿಮ್ಯುಲೇಟರ್‌ನಲ್ಲಿ ವಿಮಾನವು ಹಾರಾಟವನ್ನು ಮುಂದುವರಿಸಿತ್ತು ಎಂದು ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಓರ್ವ ಪೈಲಟ್ ತಿಳಿಸಿದರು.
ಫ್ಲಾಪ್‌ಗಳು ಚಲಿಸಬಲ್ಲ ಫಲಕಗಳಾಗಿದ್ದು ವಿಮಾನದ ರೆಕ್ಕೆಗಳ ಅಂಚಿನಲ್ಲಿ ಸ್ಥಿತಗೊಂಡಿರುತ್ತವೆ,ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ರೆಕ್ಕೆಗಳ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸಲು ಇವು ವಿಸ್ತರಿಸಲ್ಪಡುತ್ತವೆ. ಇದು ವಿಮಾನವು ಹಾರುತ್ತಿರಲು ಹೆಚ್ಚಿನ ‘ಲಿಫ್ಟ್’ ಅನ್ನು ಒದಗಿಸುತ್ತದೆ.
ಟೇಕ್‌ಆಫ್ ಅಥವಾ ಲ್ಯಾಂಡಿಂಗ್‌ನಂತಹ ಕಡಿಮೆ ವೇಗದ ಹಾರಾಟದ ಸಮಯದಲ್ಲಿ ಹೆಚ್ಚುವರಿ ವಾಯುಬಲ ವೈಜ್ಞಾನಿಕ ಶಕ್ತಿಯು ನಿರ್ಣಾಯಕವಾಗಿರುತ್ತದೆ. ಫ್ಲಾಪ್‌ಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಪೈಲಟ್‌ಗಳ ಪೈಕಿ ಓರ್ವರು ಹಸ್ತಚಾಲಿತವಾಗಿ ಸರಿಹೊಂದಿಸುತ್ತಾರೆ. ಕ್ರೂಯಿಸ್ ಫ್ಲೈಟ್(ಟೇಕ್‌ಆಫ್ ಬಳಿಕ ಸ್ಥಿರವಾದ ಎತ್ತರ ಮತ್ತು ವೇಗದಲ್ಲಿ ಹಾರಾಟ) ವೇಳೆಯಲ್ಲಿ ಅವು ಹಿಂದೆಗೆದುಕೊಳ್ಳಲ್ಪಡುತ್ತವೆ.
ಜೂ.12ರಂದು ಲಂಡನ್‌ಗೆಂದು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿದ್ದ ಏರ್ ಇಂಡಿಯಾ ವಿಮಾನವು ಕೆಲವೇ ಕ್ಷಣಗಳ ಬಳಿಕ ಸಮೀಪದ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿ ಪತನಗೊಂಡಿತ್ತು. ಪ್ರಯಾಣಿಕರು ಮತ್ತು ನೆಲದ ಮೇಲಿದ್ದವರು ಸೇರಿದಂತೆ 260 ಜನರು ಈ ದುರಂತದಲ್ಲಿ ಮೃತಪಟ್ಟಿದ್ದರು.