ಏರ್ ಇಂಡಿಯಾ ವಿಮಾನ ಪತನ | ಡಿಸೆಂಬರ್ 2025ರಲ್ಲಿ ವಿಮಾನದ ಸಮಗ್ರ ನಿರ್ವಹಣಾ ತಪಾಸಣೆ ಮಾಡಬೇಕಿತ್ತು
PC : PTI
ಹೊಸದಿಲ್ಲಿ: ಗುರುವಾರದಂದು ಅಹಮದಾಬಾದ್ ನಲ್ಲಿ ಭೀಕರ ಅಪರಾಧಕ್ಕೀಡಾದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಸಮಗ್ರ ನಿರ್ವಹಣಾ ತಪಾಸಣೆಯು ಜೂನ್ 2023ರಲ್ಲಿ ನಡೆದಿತ್ತು ಹಾಗೂ ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಮುಂದಿನ ಸಮಗ್ರ ನಿರ್ವಹಣಾ ತಪಾಸಣೆ ಬಾಕಿಯಿತ್ತು ಎಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 1.30 ಗಂಟೆಯ ವೇಳೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ನ ಗಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಈ ವಿಮಾನವು ವಸತಿ ಪ್ರದೇಶವೊಂದರ ಮೇಲೆ ಪತನಗೊಂಡಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 241ಮಂದಿ ಹಾಗೂ ನೆಲದ ಮೇಲಿದ್ದ ಹಲವರೂ ಮೃತಪಟ್ಟಿದ್ದರು.
ಶನಿವಾರ ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ವಿಟಿ-ಎಎನ್‌ಬಿ ವಿಮಾನ ಸಿ ತಪಾಸಣೆ ಅಥವಾ ಸಮಗ್ರ ತಪಾಸಣೆಗೆ ಒಳಗಾಗಿತ್ತು ಹಾಗೂ ಅದರ ಮುಂದಿನ ಸಮಗ್ರ ತಪಾಸಣೆ ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಾಕಿ ಇತ್ತು ಎಂದು ಹೇಳಿದ್ದಾರೆ.
ಈ ಸಮಗ್ರ ತಪಾಸಣೆಯನ್ನು ಎಐಇಎಸ್‌ಎಲ್ (ಎಐ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್) ನಡೆಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ 12 ವರ್ಷಗಳಷ್ಟು ಹಳೆಯದಾದ ವಿಮಾನದ ಬಲಭಾಗದ ಇಂಜಿನ್ ಅನ್ನು ಮಾರ್ಚ್ 2023ರಲ್ಲಿ ಪೂರ್ಣಪ್ರಮಾಣದಲ್ಲಿ ದುರಸ್ತಿಗೊಳಿಸಿ, ಅಳವಡಿಸಲಾಗಿತ್ತು ಹಾಗೂ ಇಂಜಿನ್ ತಯಾರಕರ ಶಿಷ್ಟಾಚಾರದ ಪ್ರಕಾರ, ಎಡ ಭಾಗದ ಇಂಜಿನ್ ನ ತಪಾಸಣೆಯನ್ನು ಎಪ್ರಿಲ್ 2025ರಲ್ಲಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಮಾನವು ಜಿಇ ಏರೋಸ್ಪೇಸ್ ಉತ್ಪಾದಿಸಿರುವ ಜಿಇಎನ್‌ಎಕ್ಸ್ ಇಂಜಿನ್‌ಗಳಿಂದ ಚಾಲಿತವಾಗಿತ್ತು ಹಾಗೂ ವಿಮಾನದ ಇಂಜಿನ್‌ಗಳಲ್ಲಾಗಲಿ ಅಥವಾ ವಿಮಾನದಲ್ಲಾಗಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಕುರಿತು ಏರ್ ಇಂಡಿಯಾ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.