ಏರ್ ಇಂಡಿಯಾ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ. 20 ಕುಸಿತ; ದರದಲ್ಲಿ ಶೇ. 15 ಕಡಿತ
pc : @airindia
ಹೊಸದಿಲ್ಲಿ: ಕಳೆದ ವಾರ ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಬಳಿಕ ಏರ್ ಇಂಡಿಯಾದ ದೇಶೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಟಿಕೆಟ್ ಬುಕ್ಕಿಂಗ್ ಪ್ರಮಾಣದಲ್ಲಿ ಶೇ. 20 ಕುಸಿತ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಟಿಕೆಟ್ ನ ದರದಲ್ಲಿ ಶೇ. 15 ಕಡಿತ ಮಾಡಿದೆ.
‘‘ಏರ್ ಇಂಡಿಯಾ ವಿಮಾನದ ದುರಂತ ಘಟನೆ ಬಳಿಕ ವಿಶೇಷವಾಗಿ ಅಂತರ ರಾಷ್ಟ್ರೀಯ ವಲಯಗಳಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲಿ ತಾತ್ಕಾಲಿಕವಾಗಿ ಕುಸಿತವಾಗಿರುವುದನ್ನು ನಾವು ಗಮನಿಸಿದ್ದೇವೆ. ನಮ್ಮ ಅಂದಾಜಿನ ಪ್ರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಶೇ. 18ರಿಂದ 22 ಹಾಗೂ ದೇಶೀಯ ಮಟ್ಟದಲ್ಲಿ ಶೇ. 10ರಿಂದ 12 ಕುಸಿತ ಕಂಡು ಬಂದಿದೆ’’ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘ (ಐಎಟಿಒ)ದ ಅಧ್ಯಕ್ಷ ರವಿ ಗೋಸೈನ್ ತಿಳಿಸಿದ್ದಾರೆ.
ದೇಶೀಯ ಮಟ್ಟದಲ್ಲಿ ವಿಶೇಷವಾಗಿ ಇಂಡಿಗೊ, ಅಕಾಸಾದಂತಹ ಕಡಿಮೆ ದರದ ವಿಮಾನ ಯಾನವನ್ನು ಒದಗಿಸುವ ಸಂಸ್ಥೆಗಳೊಂದಿಗೆ ಏರ್ ಇಂಡಿಯಾ ಸ್ಪರ್ಧಿಸುತ್ತಿರುವ ಮಾರ್ಗಗಳಲ್ಲಿ ಏರ್ ಇಂಡಿಯಾ ಟಿಕೆಟ್ ದರವನ್ನು ಶೇ. 8ರಿಂದ 12ಕ್ಕೆ ಇಳಿಸಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಯುರೋಪ್ ಹಾಗೂ ಆಗ್ನೇಯ ಏಷ್ಯಾದ ಟಿಕೇಟ್ ದರವನ್ನು ಶೇ. 10ರಿಂದ 15 ಇಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಕುಸಿತಗೊಂಡ ಬೇಡಿಕೆಯನ್ನು ಸರಿದೂಗಿಸಲು ಈ ದರ ಹೊಂದಾಣಿಕೆ ಮಾಡಲಾಗಿದೆ. ವಿಶೇಷವಾಗಿ ಕಾರ್ಪೋರೇಟ್ ಹಾಗೂ ಉನ್ನತ ಮಟ್ಟದ ವಿರಾಮ ಪ್ರಯಾಣಿಕರಲ್ಲಿ ಬುಕ್ಕಿಂಗ್ ರದ್ಧತಿ ಹೆಚ್ಚಾಗಿದೆ. ವಿಮಾನ ಅಪಘಾತದ ಒಂದು ವಾರದ ಬಳಿಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ರದ್ದತಿ ಶೇ. 15-18 ಏರಿಕೆಯಾಗಿದೆ ಹಾಗೂ ದೇಶೀಯ ಮಟ್ಟದಲ್ಲಿ ಶೇ. 8ರಿಂದ 10 ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಚೇತರಿಕೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ಅವರು, ಯಾವುದೇ ವ್ಯವಸ್ಥಿತ ಸುರಕ್ಷತಾ ವಿಷಯವನ್ನು ಗುರುತಿಸಿಲ್ಲ ಎಂದು ಗಮನ ಸೆಳೆದಿದ್ದಾರೆ. ‘‘ಏರ್ ಇಂಡಿಯಾ ಅಂತರ ರಾಷ್ಟ್ರೀಯ ಸುರಕ್ಷತಾ ಮಾನದಂಡವನ್ನು ಅನುಸರಿಸುತ್ತಿರುವುದಾಗಿ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮರು ಉಚ್ಚರಿಸಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಭಾವನೆ ಸ್ಥಿರಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಗೋಸೈನ್ ಹೇಳಿದ್ದಾರೆ.