×
Ad

2022ರಲ್ಲಿ ಭಾರತದಲ್ಲಿ 17 ಲಕ್ಷಕ್ಕೂ ಅಧಿಕ ಮಂದಿ ವಾಯುಮಾಲಿನ್ಯದಿಂದ ಮೃತಪಟ್ಟಿದ್ದರು: ಲ್ಯಾನ್ಸೆಟ್ ವರದಿ

Update: 2025-10-29 19:51 IST

ಸಾಂದರ್ಭಿಕ ಚಿತ್ರ | Photo credit : PTI

ಹೊಸದಿಲ್ಲಿ,ಅ.29: ಶ್ವಾಸಕೋಶಗಳ ಆಳವಾದ ಬಿರುಕುಗಳಿಗೆ ನುಸುಳಿ ಹಲವಾರು ರೋಗಗಳಿಗೆ ಕಾರಣವಾಗುವ ಅತಿ ಸೂಕ್ಷ್ಮಕಣ ಮಾಲಿನ್ಯಕಾರಕ ಪಿಎಂ2.5ಗೆ ಒಡ್ಡಿಕೊಂಡ ಪರಿಣಾಮ 2022ರಲ್ಲಿ ಭಾರತದಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಲ್ಯಾನ್ಸೆಟ್ ಕೌಂಟ್ಡೌನ್ ತನ್ನ ವರದಿಯಲ್ಲಿ ಹೇಳಿದೆ. ಈ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತದೆ.

12 ವರ್ಷಗಳ ಹಿಂದಿನ ದತ್ತಾಂಶಗಳಿಗೆ ಹೋಲಿಸಿದರೆ ಈ ಸಂಖ್ಯೆಯು ತೀವ್ರ ಏರಿಕೆಯನ್ನು ತೋರಿಸುತ್ತಿದೆ.

ಸುದ್ದಿಸಂಸ್ಥೆಯು ಕೇಂದ್ರ ಪರಿಸರ ಇಲಾಖೆಯ ಅಧಿಕಾರಿಯೋರ್ವರನ್ನು ಈ ಕುರಿತು ಕೇಳಿದಾಗ, ದೇಶದಲ್ಲಿ ಸುಮಾರು 20 ಲಕ್ಷ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿವೆ ಎಂಬ ಸಾಮಾಜಿಕ ಮಾಧ್ಯಮ ಪ್ರತಿಪಾದನೆಯನ್ನು ನಿರಾಕರಿಸಿರುವ ಕೇಂದ್ರ ಪರಿಸರ ಸಚಿವಾಲಯದ ಇತ್ತೀಚಿನ ಎಕ್ಸ್ ಪೋಸ್ಟ್ ನ್ನು ಫಾರ್ವರ್ಡ್ ಮಾಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ(ಲಂಡನ್ ಸಮಯ) ಬಿಡುಗಡೆಗೊಂಡ ಲ್ಯಾನ್ಸೆಟ್ ವರದಿಯನ್ನು 71 ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳ 128 ತಜ್ಞರು ಸಿದ್ಧಪಡಿಸಿದ್ದಾರೆ.

2024ರಲ್ಲಿ ಜಗತ್ತು ಎರಡು ದಶಕಗಳ ಹಿಂದಿನ ಅವಧಿಗೆ ಹೋಲಿಸಿದರೆ ಶೇ.300ಕ್ಕೂ ಅಧಿಕ ಏರಿಕೆಯೊಂದಿಗೆ ದಾಖಲೆ ಸಂಖ್ಯೆಯ ಉಷ್ಣ ಮಾರುತ ದಿನಗಳನ್ನು ಎದುರಿಸಿದೆ ಎಂದೂ ವರದಿಯು ತಿಳಿಸಿದೆ.

ಉಷ್ಣ ಸಂಬಂಧಿತ ಸಾವುಗಳು ಶೇ.23ರಷ್ಟು ಏರಿಕೆಯಾಗಿವೆ ಎಂದು ವರದಿಯು ಹೇಳಿದೆ. ಈ ಪ್ರವೃತ್ತಿಯು ಭಾರತದಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದ್ದು, ಪ್ರತಿಯೊಬ್ಬ ಭಾರತೀಯರು 2024ರಲ್ಲಿ ಸರಾಸರಿ 20 ದಿನಗಳ ಉಷ್ಣ ಮಾರುತವನ್ನು ಎದುರಿಸಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗವು ನೇರವಾಗಿ ಹವಾಮಾನ ಬದಲಾವಣೆಯೊಂದಿಗೆ ಗುರುತಿಸಿಕೊಂಡಿರಬಹುದು.

ಆದಾಗ್ಯೂ ವಾಯುಮಾಲಿನ್ಯದಿಂದ ಸಾವುಗಳು ಪ್ರಮುಖ ಕಳವಳವಾಗಿಯೇ ಉಳಿದುಕೊಂಡಿವೆ.

ಭಾರತದಲ್ಲಿ 2022ರಲ್ಲಿ ಮಾನವಜನ್ಯ ವಾಯುಮಾಲಿನ್ಯದಿಂದ(ಪಿಎಂ2.5) 17,18,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. 2010ಕ್ಕೆ ಹೋಲಿಸಿದರೆ ಇದು ಶೇ.38ರಷ್ಟು ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.

ಈ ಸಾವುಗಳ ಪೈಕಿ 7,52,00 (ಶೇ.44) ಸಾವುಗಳಿಗೆ ಪಳೆಯುಳಿಕೆ ಇಂಧನ(ಕಲ್ಲಿದ್ದಲು ಮತ್ತು ದ್ರವ ಅನಿಲ)ಕಾರಣವಾಗಿವೆ ಎಂದು ವರದಿಯು ತಿಳಿಸಿದೆ.

ಪಳೆಯುಳಿಕೆ ಇಂಧನಗಳು, ವಿಶೇಷವಾಗಿ ಕಾರುಗಳಲ್ಲಿ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿದ್ದು ಇವು ವಾಯು ಮಾಲಿನ್ಯದಿಂದ ಸಾವುಗಳು ಸಂಭವಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಹೇಳಿರುವ ವರದಿಯು, ವಾಯುಮಾಲಿನ್ಯದಿಂದ ಅತ್ಯಂತ ಹೆಚ್ಚು ಪೀಡಿತ ದೇಶಗಳಲ್ಲಿ ಭಾರತವು ಒಂದಾಗಿದೆ ಎಂದು ತಿಳಿಸಿದೆ.

2022ರಲ್ಲಿ ವಾಯು ಮಾಲಿನ್ಯದಿಂದ ಸಾವುಗಳ ಸಂಖ್ಯೆ ಆ ವರ್ಷ ಅಧಿಕೃತ ಕೋವಿಡ್ ಸಾವುಗಳಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು,ಇದು ಪರಿಸ್ಥಿತಿಯ ಅಗಾಧತೆ ಮತ್ತು ವಾಯು ಮಾಲಿನ್ಯವು ಮಾನವ ಆರೋಗ್ಯದ ಮೇಲೆ ಬೀರುವ ಪರಿಣಾಮದ ತೀವ್ರತೆಯನ್ನು ತೋರಿಸುತ್ತದೆ ಎಂದು ಕೋಲ್ಕತಾದ ಶ್ವಾಸಕೋಶ ತಜ್ಞ ಅರೂಪ್ ಹಾಲ್ದರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News