ಮಹಾರಾಷ್ಟ್ರ | ಸ್ವಾತಂತ್ರ್ಯ ದಿನದಂದು ಮಾಂಸ ನಿಷೇಧ : "ಇದು ಸರಿಯಲ್ಲ" ಎಂದ ಡಿಸಿಎಂ ಅಜಿತ್ ಪವಾರ್
ಮುಂಬೈ : ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆ ಬಳಿಕ ಮಾಲೆಗಾಂವ್, ಛತ್ರಪತಿ ಸಂಭಾಜಿ ನಗರ ಮತ್ತು ನಾಗ್ಪುರದಲ್ಲೂ ಇದೇ ರೀತಿಯ ಆದೇಶವನ್ನು ಹೊರಡಿಸಲಾಗಿದೆ. ಈ ಕ್ರಮವನ್ನು ಮಹಾರಾಷ್ಟ್ರದ ಆಡಳಿತರೂಢ ಮಹಾಯುತಿ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದಾರೆ.
ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಈ ಕುರಿತು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಅಥವಾ ಮಹಾರಾಷ್ಟ್ರ ದಿನದಂದು ಮಾಂಸದ ಅಂಗಡಿಗಳನ್ನು ಮುಚ್ಚುವುದು ಸರಿಯಲ್ಲ. ಈ ದಿನಗಳನ್ನು ಧಾರ್ಮಿಕ ಹಬ್ಬಗಳಾಗಿ ಗುರುತಿಸದ ಕಾರಣ ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ. ಕೆಲವು ಸಮುದಾಯಗಳು ಒಣ ಮೀನು ಮಿಶ್ರಿತ ಆಹಾರ ತಯಾರಿಸುವ ಪರಂಪರೆ ಹೊಂದಿದೆ ಎಂದು ಹೇಳಿದರು.
ಆಷಾಢ, ಏಕಾದಶಿ ಅಥವಾ ಮಹಾವೀರ ಜಯಂತಿಯಂದು ಮಾಂಸ ನಿಷೇಧ ಜಾರಿಯಲ್ಲಿದ್ದರೆ ಈ ನಿಷೇಧ ಅರ್ಥವಾಗುತ್ತಿತ್ತು. ಆದರೆ, ಅಂತಹ ಸಂದರ್ಭವಿಲ್ಲದಿದ್ದಾಗ, ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಏಕೆ ಒತ್ತಾಯಿಸಬೇಕು? ನಮ್ಮ ದೇಶದಲ್ಲಿ ಶತಮಾನಗಳಿಂದ ಜನರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಗ್ರಾಮೀಣ ಭಾಗಗಳು ಮತ್ತು ಬುಡಕಟ್ಟು ಸಮುದಾಯಗಳಲ್ಲಿರುವವರು ರಜಾದಿನಗಳಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಾರೆ ಎಂದು ಅಜಿತ್ ಪವಾರ್ ಹೇಳಿದರು.
ಆಗಸ್ಟ್ 15ರಂದು ಮಾಂಸಾಹಾರಿ ಆಹಾರವನ್ನು ಸೇವಿಸುವುದಾಗಿ ಶಿವಸೇನಾ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಘೋಷಿಸಿದ್ದಾರೆ. ಪುರಸಭೆ ಆಯುಕ್ತರನ್ನು ಅಮಾನತುಗೊಳಿಸಬೇಕು. ಜನರು ಏನನ್ನು ತಿನ್ನಬೇಕೆಂದು ಹೇಳುವ ಅಧಿಕಾರ ಅವರಿಗೆ ಇಲ್ಲ. ನಿಯಮಿತವಾಗಿ ಮಾಂಸಾಹಾರಿ ಆಹಾರವನ್ನು ಸೇವಿಸುವ ಅಗರಿ ಮತ್ತು ಕೋಲಿಯಂತಹ ಸಮುದಾಯಗಳ ಜನರು ಏನು ಮಾಡಬೇಕು? ಹಿಂದೂ ಧರ್ಮವು ಜನರಿಗೆ ತಮ್ಮದೇ ಆದ ಆಹಾರಗಳನ್ನು ಆಯ್ಕೆ ಮಾಡುವ ಅವಕಾಶ ನೀಡುವಾಗ ಮಹಾರಾಷ್ಟ್ರದ ಮೇಲೆ ಸಸ್ಯಾಹಾರವನ್ನು ಹೇರುವುದೇಕೆ ಎಂದು ಅವರು ಪ್ರಶ್ನಿಸಿದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ನಾಯಕ ಬಾಲಾ ನಂದಗಾಂವ್ಕರ್ ಅವರು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ರಸ್ತೆಗಳ ಕಳಪೆ ಸ್ಥಿತಿ, ಸಂಚಾರ ದಟ್ಟಣೆ ಮತ್ತು ಮಾಲಿನ್ಯದಂತಹ ನಿರ್ಣಾಯಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸರಕಾರದ ತಂತ್ರವಾಗಿದೆ ಎಂದು ಹೇಳಿದರು.