×
Ad

ಮುಖ್ಯಮಂತ್ರಿಯಾಗಲು ಇನ್ನೂ ಕಾಯುತ್ತಿದ್ದೇನೆ, ಯೋಗ ಕೂಡಿ ಬಂದಿಲ್ಲ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್

Update: 2025-05-05 19:54 IST

ಅಜಿತ್ ಪವಾರ್ | PC :PTI

ಮುಂಬೈ: “ನಾನು ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆಯಿದೆ. ಆದರೆ, ನನಗೆ ಯೋಗ, ಅವಕಾಶ ಇಲ್ಲದೆ ಹೋಗಿದ್ದರಿಂದ, ಅದರಿಂದ ವಂಚಿತನಾಗಿದ್ದೇನೆ. ನಾನು ಈಗಲೂ ಕೂಡಾ ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಾರ್ವಜನಿಕ ಹೇಳಿಕೆ ನೀಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಇಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ್ ರಾಣೆ ಹಾಗೂ ಅಶೋಕ್ ಚೌಹಾಣ್ ಎದುರೇ ಮುಖ್ಯಮಂತ್ರಿಯಾಗುವ ತಮ್ಮ ಬಯಕೆಯನ್ನು ವ್ಯಕ್ತಪಡಿಸುವ ಮೂಲಕ, ಅಜಿತ್ ಪವಾರ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

1999ರಲ್ಲಿ ಮಹಾರಾಷ್ಟ್ರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ, ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ಎದುರುಗೊಂಡಿತ್ತು. ಆದರೆ, ಆ ಸಂದರ್ಭದಲ್ಲಿನ ಚುನಾವಣಾ ಒಪ್ಪಂದದ ಪ್ರಕಾರ, ಯಾವ ಮೈತ್ರಿ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುತ್ತದೊ, ಆ ಪಕ್ಷದ ಅಭ್ಯರ್ಥಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂದು ಮಾತುಕತೆಯಾಗಿತ್ತು. ಹೀಗಾಗಿ, ಕಾಂಗ್ರೆಸ್ ಪಕ್ಷದ ವಿಲಾಸ್ ರಾವ್ ದೇಶ್ ಮುಖ್ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಇದಾದ ನಂತರ, 2009ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್ಸಿಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ಅಜಿತ್ ಪವಾರ್ ಈ ಬಾರಿಯಾದರೂ ಮುಖ್ಯಮಂತ್ರಿಯಾಗಬಹುದು ಎಂದು ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಆಗ ಮಿತ್ರಪಕ್ಷಗಳಾಗಿದ್ದ ಕಾಂಗ್ರೆಸ್ ಹಾಗೂ ಎನ್ಸಿಪಿ ನಡುವಿನ ಹೊಸ ಒಪ್ಪಂದದ ಪ್ರಕಾರ, ಮುಖ್ಯಮಂತ್ರಿ ಹುದ್ದೆ ಮತ್ತೆ ಕಾಂಗ್ರೆಸ್ ಪಾಲಾದರೆ, ಗೃಹ ಹಾಗೂ ಇನ್ನಿತರ ಪ್ರಮುಖ ಖಾತೆಗಳು ಎನ್ಸಿಪಿಗೆ ಹಂಚಿಕೆಯಾಗಿದ್ದವು. ಹೀಗಾಗಿ, ಸತತ ಎರಡನೆ ಬಾರಿಯೂ ಅವರು ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿದ್ದರು. ಇದರಿಂದ ಅಸಹಾಯಕರಾಗಿದ್ದ ಅಜಿತ್ ಪವಾರ್, ನೂತನ ಅಧಿಕಾರ ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿದ್ದರು. ಆದರೆ, ಇದಾದ ನಂತರ, ಈ ಅಧಿಕಾರ ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳುವ ಮೂಲಕ, ಎನ್ಸಿಪಿ ನಾಯಕತ್ವ ತಪ್ಪು ಮಾಡಿದೆ ಎಂದು ಅವರು ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಬಳಿಕ, 2009ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರಿಂದಾಗಿ, ಅವರನ್ನು ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಹೊರಗಿಡಲಾಗಿತ್ತು ಎಂದು ಬಹಿರಂಗಪಡಿಸಿದ್ದ ಎನ್ಸಿಪಿ ನಾಯಕರು, ಅವರು ಮುಖ್ಯಮಂತ್ರಿಯಾಗುವ ಅವಕಾಶಕ್ಕಾಗಿ ಇನ್ನಷ್ಟು ದೀರ್ಘಕಾಲ ಕಾಯಬೇಕು ಎಂದು ತಾಕೀತು ಮಾಡಿದ್ದರು.

2019ರಲ್ಲಿ ಎನ್ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗಲೂ, ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ, ಮತ್ತೆ ಮುಖ್ಯಮಂತ್ರಿ ಹುದ್ದೆ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪಾಲಾಗಿತ್ತು. ಇದರಿಂದಾಗಿ, ಅಜಿತ್ ಪವಾರ್ ಸತತ ಮೂರನೆಯ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿದ್ದರು. ಇದರಿಂದಾಗಿ ಒಳಗೊಳಗೇ ಅಸಮಾಧಾನದಿಂದ ಕುದಿಯುತ್ತಿದ್ದ ಅಜಿತ್ ಪವಾರ್, 2022ರಲ್ಲಿ ತಮ್ಮ ಮಾತೃಪಕ್ಷ ಎನ್ಸಿಪಿಯನ್ನೇ ವಿಭಜಿಸಿ, ಬಿಜೆಪಿ ತೆಕ್ಕೆಗೆ ಹಾರಿದ್ದರು. ಮತ್ತೊಂದೆಡೆ, ಮಹಾವಿಕಾಸ್ ಅಘಾಡಿಯ ಮೈತ್ರಿ ಪಕ್ಷವಾಗಿದ್ದ ಶಿವಸೇನೆಯನ್ನು ವಿಭಜಿಸಿದ್ದ ಏಕನಾಥ್ ಶಿಂದೆ ಕೂಡಾ ಬಿಜೆಪಿಯೊಂದಿಗೆ ಕೈಕುಲುಕಿದ್ದರು. ಆದರೆ, ಆ ಬಾರಿಯೂ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಅಜಿತ್ ಪವಾರ್ ಅವರ ಮಹತ್ವಾಕಾಂಕ್ಷೆ ಈಡೇರಿರಲಿಲ್ಲ. ಅವರ ಬದಲಿಗೆ, ಶಿವಸೇನೆಯನ್ನು ವಿಭಜಿಸಿ, ಬಿಜೆಪಿ ತೆಕ್ಕೆಗೆ ಜಾರಿದ್ದ ಏಕನಾಥ್ ಶಿಂದೆಗೆ ಮುಖ್ಯಮಂತ್ರಿಯಾಗುವ ಯೋಗ ಲಭಿಸಿತ್ತು. ಹೀಗಾಗಿ, ಸತತ ಮೂರನೆಯ ಬಾರಿ ಕೂಡಾ ಅವರು ಉಪ ಮುಖ್ಯಮಂತ್ರಿ ಹುದ್ದೆಗೇ ತೃಪ್ತರಾಗಿದ್ದರು.

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎನ್ಸಿಪಿ (ಅಜಿತ್ ಪವಾರ್ ಬಣ) ಹಾಗೂ ಶಿವಸೇನೆ (ಏಕನಾಥ್ ಶಿಂದೆ ಬಣ) ಒಳಗೊಂಡ ಮಹಾಯುತಿ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು. ಆದರೆ, ಈ ಬಾರಿ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದ್ದರಿಂದಾಗಿ, ಮುಖ್ಯಮಂತ್ರಿ ಹುದ್ದೆ ಅದರ ಪಾಲಾಗಿತ್ತು. ಹೀಗಾಗಿ, ಈ ಬಾರಿ ಕೂಡಾ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಹುದ್ದೆಗೇ ಸೀಮಿತವಾಗಬೇಕಾಯಿತು.

ಸದ್ಯ, ಕಳೆದ ಅವಧಿಯಲ್ಲಿ ಮಹಾಯುತಿ ಮೈತ್ರಿಕೂಟ ಸರಕಾರದ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂದೆ, ತಮಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದ್ದರಿಂದಾಗಿ ಅಸಮಾಧಾನಗೊಂಡಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರೊಂದಿಗೆ ಶೀತಲ ಸಮರ ನಡೆಸುತ್ತಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇಂತಹ ಹೊತ್ತಿನಲ್ಲಿಯೇ, ಮಹಾಯುತಿ ಮೈತ್ರಿಕೂಟ ಸರಕಾರದ ಮತ್ತೊಂದು ಪ್ರಮುಖ ಅಂಗಪಕ್ಷವಾದ ಎನ್ಸಿಪಿ(ಅಜಿತ್ ಪವಾರ್ ಬಣ)ಯ ಮುಖ್ಯಸ್ಥ ಅಜಿತ್ ಪವಾರ್ ಕೂಡಾ ಮುಖ್ಯಮಂತ್ರಿಯಾಗಬೇಕು ಎಂಬ ತಮ್ಮ ಬಯಕೆಯನ್ನು ಸಾರ್ವಜನಿಕವಾಗಿಯೇ ವ್ಯಕ್ತಪಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಜಿತ್ ಪವಾರ್ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಬೆನ್ನಿಗೇ, ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ (ಉದ್ಧವ್ ಬಣ) ನಾಯಕ ವಿನಾಯಕ್ ರಾವತ್, ಒಂದು ವೇಳೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೇನಾದರೂ ಮುಖ್ಯಮಂತ್ರಿಯಾಗಬೇಕಿದ್ದರೆ, ಅವರು ಮತ್ತೆ ತಮ್ಮ ಮಾತೃಪಕ್ಷಕ್ಕೆ ಮರಳಬೇಕು ಎಂದು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News