"ರೈತರಿಗೆ ಎಲ್ಲವೂ ಉಚಿತವಾಗಿ ಯಾಕೆ ಬೇಕು?": ಕೃಷಿ ಸಾಲ ಮನ್ನಾ ಕುರಿತು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿವಾದಾತ್ಮಕ ಹೇಳಿಕೆ
ಮುಂಬೈ: ರೈತರಿಗೆ ಎಲ್ಲವೂ ಉಚಿತವಾಗಿ ಯಾಕೆ ಬೇಕು? ರೈತರು ಯಾವಾಗಲೂ ಸಾಲ ಮನ್ನಾ ಮಾಡುವಂತೆ ಕೇಳುತ್ತಿರುವುದೇಕೆ? ಎಂದು ಪ್ರಶ್ನಿಸುವ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿವಾದವನ್ನು ಸೃಷ್ಟಿಸಿದ್ದಾರೆ.
ರ‍್ಯಾಲಿಯಲ್ಲಿ ಮಾತನಾಡಿದ ಡಿಸಿಎಂ ಅಜಿತ್ ಪವಾರ್, ರೈತರು ಯಾವಾಗಲೂ ಕೃಷಿ ಸಾಲ ಮನ್ನಾ ಮಾಡಬೇಕೆಂದು ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಕೇಳಿದರು. ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರ ಅವಧಿಯಲ್ಲಿ ಮತ್ತು ನಂತರ ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರಕಾರ ಕೃಷಿ ಸಾಲಗಳನ್ನು ಮನ್ನಾ ಮಾಡಿದ್ದವು. ಕೃಷಿ ಸಾಲ ಮನ್ನಾ ಆಗಾಗ್ಗೆ ಮಾಡಬೇಕಾದ ವಿಷಯವಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲವನ್ನು ನೀಡುತ್ತದೆ. ಆದರೂ, ರೈತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬರಲು ಬಯಸಿದ್ದೆವು. ಆದ್ದರಿಂದ ನಾವು 2024ರ ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೇವೆ. ಈಗ ರೈತರು ಕೃಷಿ ಸಾಲ ಮನ್ನಾವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಇದನ್ನು ಜಾರಿಗೆ ತರುವುದು ಸುಲಭವಲ್ಲ. ಇದನ್ನು ಕಾರ್ಯಗತಗೊಳಿಸಲು ಸಾವಿರಾರು ಕೋಟಿ ರೂ. ಅಗತ್ಯವಿದೆ ಎಂದು ಅಜಿತ್ ಪವಾರ್ ಹೇಳಿದರು.
ರೈತರ ಸಾಲಮನ್ನಾ ಕುರಿತ ಅಜಿತ್ ಪವಾರ್ ಹೇಳಿಕೆಗೆ ವಿರೋಧ ಪಕ್ಷಗಳು ವ್ಯಾಪಕವಾಗಿ ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, “ಸಾಲಮನ್ನಾ ಮಾಡುವ ಬಗ್ಗೆ ಮಹಾಯುತಿ ಚುನಾವಣಾ ಪ್ರಚಾರದ ಸಮಯದಲ್ಲೇ ಭರವಸೆ ನೀಡಿತ್ತು. ಈಗ ಆ ಭರವಸೆಯಿಂದ ನುಣುಚಿಕೊಳ್ಳುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ, ಆದ್ದರಿಂದಲೇ ಅವರು ಸಾಲಮನ್ನಾ ಮಾಡುವಂತೆ ಕೇಳುತ್ತಿದ್ದಾರೆ. ಅವರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಮಹಾಯುತಿಗೆ ನೆನಪಿಸುತ್ತಿದ್ದಾರೆ. ಈ ಸರಕಾರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು. ಕೊಟ್ಟ ಮಾತುಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದರು.