ಅಜ್ಮೀರ್ ಸಮೀಪ ಹಿಂದೂ ಸೇನೆ ಅಧ್ಯಕ್ಷರ ಕಾರಿನ ಮೇಲೆ ಗುಂಡು
ವಿಷ್ಣು ಗುಪ್ತ | ANI
ಜೈಪುರ : ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತರ ಕಾರಿನತ್ತ ಇಬ್ಬರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ್ಣು ಗುಪ್ತ ಶನಿವಾರ ಮುಂಜಾನೆ ಅಜ್ಮೀರ್‌ನಿಂದ ದಿಲ್ಲಿಗೆ ವಾಪಸಾಗುತ್ತಿದ್ದಾಗ ದಾಳಿ ನಡೆದಿದೆ ಎನ್ನಲಾಗಿದೆ.
ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಯು ಅಜ್ಮೀರ್ ಶರೀಫ್ ದರ್ಗಾದ ಸಮೀಕ್ಷೆ ನಡೆಸಬೇಕು ಎಂದು ಕೋರಿ ವಿಷ್ಣು ಶರ್ಮಾ ಕಳೆದ ವರ್ಷ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು.
‘‘ಅಜ್ಮೀರ್-ದಿಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಗ್‌ವಾನಾ ಗ್ರಾಮದ ಸಮೀಪ ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮೇಲ್ನೋಟಕ್ಕೆ ಕಾರಿನಲ್ಲಿ ಗುಂಡಿನ ರಂಧ್ರವೊಂದು ಪತ್ತೆಯಾಗಿದೆ. ಕಾರು ಮತ್ತು ಸುತ್ತಲಿನ ಪ್ರದೇಶವನ್ನು ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ನಾವು ಕರೆದಿದ್ದೇವೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸುತ್ತಿದ್ದೇವೆ. ವಿಷ್ಣು ಗುಪ್ತಾ ಕ್ಷೇಮವಾಗಿದ್ದಾರೆ. ನಾವು ಅವರನ್ನು ಪ್ರಶ್ನಿಸುತ್ತಿದ್ದೇವೆ ಮತ್ತು ಪಾತಕಿಗಳಿಗಾಗಿಯೂ ಹುಡುಕಾಡುತ್ತಿದ್ದೇವೆ’’ ಎಂದು ಅಜ್ಮೀರ್ ಪೊಲೀಸ್ ಸೂಪರಿಂಟೆಂಡೆಂಡ್ ವಂದಿತಾ ರಾಣಾ ತಿಳಿಸಿದರು.
ಅಜ್ಮೀರ್ ದರ್ಗಾಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ವಿಷ್ಣು ಗುಪ್ತಾ ಶುಕ್ರವಾರ ಅಜ್ಮೀರ್‌ಗೆ ಬಂದಿದ್ದರು.