ವಿಡಿಯೋ ಗೇಮ್ ಆಡುತ್ತಿದ್ದ ವೇಳೆ ನನ್ನ ಪುತ್ರಿಗೆ ಬೆತ್ತಲೆ ಚಿತ್ರ ಹಂಚಿಕೊಳ್ಳುವಂತೆ ಕೇಳಲಾಯಿತು: ಭಯಾನಕ ಸಂಗತಿಯನ್ನು ಬಿಚ್ಚಿಟ್ಟ ನಟ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ | Photo Credit : PTI
ಮುಂಬೈ: ಉಲ್ಬಣಿಸುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಬಲವಾದ ಎಚ್ಚರಿಕೆ ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್, "ಕೆಲ ತಿಂಗಳ ಹಿಂದೆ ನನ್ನ ಪುತ್ರಿ ವೀಡಿಯೊ ಗೇಮ್ ಆಡುವಾಗ, ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಸಂದೇಶ ರವಾನಿಸಿ, ಆಕೆಯ ಲಿಂಗ ಪ್ರಶ್ನಿಸಿದ. ಅಕೆ ತಾನು ಹೆಣ್ಣು ಎಂಬ ಉತ್ತರ ನೀಡಿದಳು. ತಕ್ಷಣವೇ ಆತ ಬೆತ್ತಲೆ ಚಿತ್ರಗಳನ್ನು ಹಂಚಿಕೊಳ್ಳುವಂತೆ ಆಕೆಗೆ ಮನವಿ ಮಾಡಿದ. ಕೂಡಲೇ ವೀಡಿಯೊ ಗೇಮ್ ಅನ್ನು ಸ್ವಿಚ್ಡ್ ಆಫ್ ಮಾಡಿದ ನನ್ನ ಪುತ್ರಿ, ಆ ಸಂಗತಿಯನ್ನು ತನ್ನ ತಾಯಿಗೆ ತಿಳಿಸಿದಳು" ಎಂದು ತಮ್ಮದೇ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ಆಯೋಜಿಸಲಾಗಿದ್ದ ಸೈಬರ್ ಜಾಗೃತಿ ಮಾಸ, 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಕ್ಷಯ್ ಕುಮಾರ್, 7ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಸೈಬರ್ ತರಗತಿ ಪರಿಚಯಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮನವಿ ಮಾಡಿದರು.
ಸೈಬರ್ ಅಪರಾಧಗಳು ಸಾಂಪ್ರದಾಯಿಕ ಬೀದಿ ಅಪರಾಧಗಳನ್ನೂ ಮೀರಿಸಿವೆ ಎಂದು ಅಭಿಪ್ರಾಯ ಪಟ್ಟ ಅವರು, ಆನ್‌ಲೈನ್ ವಂಚಕರು ಹಾಗೂ ಬೆದರಿಕೆಗಳಿಂದ ಮಕ್ಕಳನ್ನು ರಕ್ಷಿಸಲು ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಮುಂದಿನ ತಲೆಮಾರು ಡಿಜಿಟಲ್ ಜಗತ್ತಿನ ಸುರಕ್ಷತೆಯ ಬಗ್ಗೆ ಅಗತ್ಯ ಅರಿವು ಮೂಡಿಸಿಕೊಳ್ಳಲು ಕಡ್ಡಾಯವಾಗಿ ಸೈಬರ್ ತರಗತಿಗಳನ್ನು ಪರಿಚಯಿಸಬೇಕು ಎಂದು ಅವರು ಮನವಿ ಮಾಡಿದರು.