ಬಂಧಿತ ವೈದ್ಯರಿಂದ ಅಂತರ ಕಾಯ್ದುಕೊಂಡ ಅಲ್ ಫಲಾಹ್ ವಿವಿ | ದಿಲ್ಲಿ ಕಾರು ಸ್ಫೋಟ ತನಿಖೆಗೆ ಸಂಪೂರ್ಣ ಸಹಕಾರದ ಘೋಷಣೆ
PC : indiatoday.in
ಚಂಡೀಗಡ,ನ.12: ಹರ್ಯಾಣದ ಫರೀದಾಬಾದ್ ಜಿಲ್ಲೆಯಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾನಿಲಯವು ದಿಲ್ಲಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ವೈದ್ಯರಿಂದ ಅಂತರವನ್ನು ಕಾಯ್ದುಕೊಂಡಿರುವುದಾಗಿ ಬುಧವಾರ ತಿಳಿಸಿದೆ.
ಈ ಬಗ್ಗೆ ಹೇಳಿಕೆಯೊಂದನ್ನು ಪ್ರಕಟಿಸಿರುವ ವಿಶ್ವವಿದ್ಯಾನಿಲಯವು, ದಿಲ್ಲಿ ಕಾರು ಸ್ಫೋಟ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿಯೂ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳು, ವಿಶ್ವವಿದ್ಯಾನಿಲಯದಲ್ಲಿ ಅಧಿಕೃತ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಬಿಟ್ಟರೆ, ಅವರೊಂದಿಗೆ ವಿವಿಗೆ ಬೇರೆ ಯಾವುದೇ ರೀತಿಯಲ್ಲಿ ಸಂಪರ್ಕವಿಲ್ಲವೆಂದು ಅಲ್ ಫಲಾಹ್ ವಿಶ್ವವಿದ್ಯಾನಿಲಯದ ಉಪಕುಲಪತಿ, ಪ್ರೊ. ಡಾ. ಭೂಪಿಂದರ್ ಕೌರ್ ಆನಂದ್ ತಿಳಿಸಿದ್ದಾರೆ.
‘‘ ನಡೆದಂತಹ ದುರೃಷ್ಟಕರ ಬೆಳವಣಿಗೆಗಳಿಂದಾಗಿ ನಮಗೆ ಗಾಢವಾದ ವಿಷಾದವಾಗಿದೆ ಹಾಗೂ ಆಕ್ರೋಶಗೊಂಡಿದ್ದೇವೆ ಮತ್ತು ಅದನ್ನು ನಾವು ಖಂಡಿಸುತ್ತೇವೆ. ಈ ಸಂಕಟಕರ ಘಟನೆಗಳಿಂದ ಬಾಧಿತರಾದವರಿಗೆ ನಮ್ಮ ಸಾಂತ್ವನಗಳು ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಇಬ್ಬರು ವೈದ್ಯರನ್ನು ತನಿಖಾ ಏಜೆನ್ಸಿಗಳು ಬಂಧಿಸಿವೆಯೆಂಬುದಾಗಿ ನಮಗೆ ತಿಳಿದುಬಂದಿದೆ. ಅಧಿಕೃತ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಬಿಟ್ಟರೆ ಆ ವ್ಯಕ್ತಿಗಳ ಜೊತೆ ವಿವಿಗೆ ಯಾವುದೇ ಸಂಪರ್ಕವಿಲ್ಲ’’ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಪ್ರತಿಷ್ಠೆ ಹಾಗೂ ಸದ್ಭಾವನೆಗೆ ಕಳಂಕ ತರುವಂತಹ ಸ್ಪಷ್ಟ ಉದ್ದೇಶದೊಂದಿಗೆ ಕೆಲವು ನಿರ್ದಿಷ್ಟ ಆನ್ಲೈನ್ ವೇದಿಕೆಗಳು ಆಧಾರರಹಿತ ಹಾಗೂ ದಾರಿತಪ್ಪಿಸುವ ಕಥೆಗಳನ್ನು ಹರಿಯಬಿಟ್ಟಿರುವ ಬಗ್ಗೆ ವಿಶ್ವವಿದ್ಯಾನಿಲಯವು ಗಾಢವಾದ ಕಳವಳದೊಂದಿಗೆ ಗಮನಿಸುತ್ತಿದೆ. ಅಂತಹ ಯಾವುದೇ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ’’ ಎಂದು ಭೂಪೀಂದರ್ ಕೌರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ನಿರ್ದಿಷ್ಟ ಆನ್ಲೈನ್ ವೇದಿಕೆಗಳು ಆರೋಪಿಸಿರುವಂತಹ ಯಾವುದೇ ರಾಸಾಯನಿಕ ಅಥವಾ ಸಾಧನಗಳನ್ನು ವಿವಿಯ ಆವರಣದಲ್ಲಿ ದಾಸ್ತಾನು ಮಾಡಲಾಗಿಲ್ಲ. ವಿವಿಯ ಪ್ರಯೋಗಶಾಲೆಗಳನ್ನು ಎಂಬಿಬಿಎಸ್ ಮತ್ತಿತರ ಅಧಿಕೃತ ಕೋರ್ಸ್ಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ತರಬೇತಿ ಅಗತ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ. ಪ್ರಯೋಗಾಲಯದ ಚಟುವಟಿಕೆಗಳನ್ನು ಕೂಡಾ ಕಾನೂನು ನಿಯಂತ್ರಕ ಸಂಸ್ಥೆಗಳ ನಿರ್ದೇಶನದಂತೆ ಸ್ಥಾಪಿತ ಸುರಕ್ಷತಾ ಶಿಷ್ಟಾಚಾರಗಳು, ಸಾಂವಿಧಾನಿಕ ನಿಯಮಗಳು ಹಾಗೂ ನೈತಿಕ ಮಾನದಂಡಗಳಿಗೆ ಅನುಗುಣವಾಗಿ ಬಳಕೆಯಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಜವಾಬ್ದಾರಿಯುತ ಶಿಕ್ಷಣಸಂಸ್ಥೆಯಾಗಿ, ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಆಹಗೂ ನಮ್ಮ ದೇಶದ ಏಕತೆ,ಶಾಂತಿ ಹಾಗೂ ಭದ್ರತೆಗಾಗಿ ಅಚಲ ಬದ್ಧತೆಯನ್ನು ನಾವು ಮರುದೃಢಪಡಿಸುತ್ತೇವೆ. ಇದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರೀಯ ಭದ್ರತೆಗಿಂತ ಸಂಬಂಧಿಸಿದ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ತಾರ್ಕಿಕ, ನ್ಯಾಯಯುತ ಹಾಗೂ ದೃಢವಾದ ತೀರ್ಮಾನಕ್ಕೆ ಬರುವಂತೆ ಮಾಡಲು ಅವುಗಳಿಗೆ ಸಂಪೂರ್ಣ ಸಕಾರ ನೀಡವುದಾಗಿ ಹೇಳಿಕೆ ತಿಳಿಸಿದೆ.