×
Ad

ಖತರ್ ನಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರದಿಂದ ಸಕಲ ಪ್ರಯತ್ನ ; ನೌಕಾಪಡೆ ವರಿಷ್ಠ ಹರಿಕುಮಾರ್

Update: 2023-12-01 22:11 IST

ಆರ್. ಹರಿಕುಮಾರ್ | Photo; PTI 

ಹೊಸದಿಲ್ಲಿ: ಬೇಹುಗಾರಿಕೆಯ ಆರೋಪದಲ್ಲಿ ಖತರ್ ನಲ್ಲಿ ಬಂಧಿಸಲ್ಪಟ್ಟು ಅಲ್ಲಿನ ನ್ಯಾಯಾಲಯದಿಂದ ಮರಣದಂಡನೆ ವಿಧಿಸಲ್ಪಟ್ಟಿರುವ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಯೋಧರನ್ನು ಸ್ವದೇಶಕ್ಕೆ ಮರಳಿ ಕರೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದೆಂದು ನೌಕಾಪಡೆಯ ವರಿಷ್ಠ ಆಡ್ಮಿರಲ್ ಆರ್. ಹರಿಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ ಬಂಧಿತರ ಹಿತಾಸಕ್ತಿಗಳನ್ನು ಕಾಪಾಡುವುದನ್ನು ಖಾತರಿಪಡಿಸಲು ನಾವು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ’’ ಎಂದರು. ಅವರನ್ನು ವಾಪಸ್ ಕರೆತರುವ ಬಗ್ಗೆ ಭಾರತ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಯೋಧರನ್ನು ಖತರ್ನಿಂದ ವಾಪಾಸ್ ತರಲು ಭಾರತವು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆಯೆಂದು ಅವರು ತಿಳಿಸಿದರು.

ಖತರ್ನ ನ್ಯಾಯಾಲಯವು ಈ ಎಂಟು ಮಂದಿ ಮಾಜಿ ಯೋಧರಿಗೆ ಬೇಹುಗಾರಿಕೆಯ ಆರೋಪದಲ್ಲಿ ಮರಣದಂಡನೆಯನ್ನು ವಿಧಿಸಿತ್ತು. ಈ ತೀರ್ಪು ಅತ್ಯಂತ ಆಘಾತಕಾರಿ ಎಂದು ಬಣ್ಣಿಸಿದ ಭಾರತವು, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನಾತ್ಮಕ ಆಯ್ಕೆಗಳನ್ನು ತಾನು ಪರಿಶೀಲಿಸುತ್ತಿರುವುದಾಗಿ ತಿಳಿಸಿತ್ತು.

ಎಂಟು ಮಂದಿ ಮಾಜಿ ಭಾರತೀಯ ಯೋಧರಿಗೆ ಮರಣದಂಡನೆ ಘೋಷಿಸಿರುವುದರ ವಿರುದ್ಧ ಈಗಾಗಲೇ ಮೇಲ್ಮನವಿಯನ್ನು ಸಲ್ಲಿಸಲಾಗಿದ್ದು, ಕತರ್ನ ಉನ್ನತ ನ್ಯಾಯಾಲಯವುಈ ಅರ್ಜಿಯನ್ನು ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು. ಬಂಧಿತ ಭಾರತೀಯ ಪ್ರಜೆಗಳ ನ್ಯಾಯವಾದಿಗಳ ತಂಡವು ಈ ಅರ್ಜಿಯನ್ನು ಸಲ್ಲಿಸಿದೆ.

ಖತರ್ ನಲ್ಲಿರುವ ಖಾಸಗಿ ಕಂಪೆನಿ ಅಲ್ ದಹರಾದಲ್ಲಿ ಕೆಲಸ ಮಾಡುತ್ತಿದ್ದ ಈ ಭಾರತೀಯ ಪ್ರಜೆಗಳನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ಬೇಹುಗಾರಿಕೆಯ ಆರೋಪದಲ್ಲಿ ಬಂಧಿಸಲಾಗಿತ್ತು. ಖತರ್ನ ಅಧಿಕಾರಿಗಳಾಗಲಿ ಅಥವಾ ಹೊಸದಿಲ್ಲಿಯಾಗಲಿ ಈ ಭಾರತೀಯ ಪ್ರಜೆಗಳ ವಿರುದ್ಧದ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

ಈ ಎಂಟು ಮಂದಿ ಮಾಜಿ ಯೋಧರು ಭಾರತೀಯ ನೌಕಾಪಡೆಯಲ್ಲಿ ಸುಮಾರು 20 ವರ್ಷಗಳ ಕಾಲ ನಿಷ್ಕಳಂಕವಾದ ಸೇವಾದಾಖಲೆಯನ್ನು ಹೊಂದಿದ್ದಾರೆ ಹಾಗೂ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಮಾಜಿ ಸೇನಾಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News