ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ | ಸರ್ವಪಕ್ಷ ಸಭೆಯಲ್ಲಿ ಕಾರ್ಯಾಚರಣೆಯ ವಿವರ ಒದಗಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
Photo credit: PTI
ಹೊಸದಿಲ್ಲಿ: ಬುಧವಾರ ಮುಂಜಾನೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, ಇಂದು (ಗುರುವಾರ) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ವಿಪಕ್ಷಗಳ ನಾಯಕರಿಗೆ ವಿವರ ಒದಗಿಸಿದರು. ಬುಧವಾರ ಮುಂಜಾನೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕರ ಶಿಬಿರಗಳನ್ನು ಭಾರತೀಯ ಸಶಸ್ತ್ರ ಪಡೆಗಳು ನಾಶಗೊಳಿಸಿದ್ದವು.
ಈ ಸರ್ವಪಕ್ಷ ಸಭೆಯಲ್ಲಿ ಮುರಿಡ್ಕೆಯಲ್ಲಿನ ಲಷ್ಕರೆ ತೊಯ್ಬಾದ ಮುಖ್ಯ ಕಚೇರಿ ಹಾಗೂ ಬಹವಲ್ಪುರ್ ನಲ್ಲಿನ ಪ್ರಮುಖ ಭಯೋತ್ಪಾದನಾ ತರಬೇತಿ ತಾಣಗಳ ಗುರಿಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯ ಕುರಿತು ವಿಪಕ್ಷಗಳ ನಾಯಕರಿಗೆ ಕೇಂದ್ರ ಸರಕಾರ ಮಾಹಿತಿ ನೀಡಿತು.
ಈ ವೇಳೆ ಕಾರ್ಯಾಚರಣೆಯ ಉದ್ದೇಶ, ನಿರ್ದಿಷ್ಟ ಭಯೋತ್ಪಾದಕ ಗುರಿಗಳ ಮೇಲೆ ನಡೆದ ದಾಳಿ, ಈ ದಾಳಿಯಿಂದಾಗಲಿರುವ ವ್ಯೂಹಾತ್ಮಕ ಹಾಗೂ ಭದ್ರತಾ ಪರಿಣಾಮಗಳು ಹಾಗೂ ಒಂದು ವೇಳೆ ಪಾಕಿಸ್ತಾನವೇನಾದರೂ ಪ್ರತೀಕಾರದ ಕ್ರಮಕ್ಕೆ ಮುಂದಾದರೆ, ಅದನ್ನು ಎದುರಿಸಲು ಸಜ್ಜಾಗಿರುವ ಭಾರತದ ಸನ್ನದ್ಧತೆಯ ಕುರಿತು ವಿಪಕ್ಷಗಳ ನಾಯಕರಿಗೆ ವಿವರಿಸಲಾಯಿತು.
ಈ ಸರ್ವಪಕ್ಷ ಸಭೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗಡಿಯಲ್ಲಿನ ಉದ್ವಿಗ್ನತೆ ಹಾಗೂ ಪರಿಸ್ಥಿತಿಯ ಬೆಳವಣಿಗೆಗಳ ಕುರಿತು ಅವರಿಗೆ ಮಾಹಿತಿ ನೀಡಿದರು.