ಮತದಾನ ಪ್ರಮಾಣ ಕುರಿತು ಆರೋಪ | ಖರ್ಗೆಗೆ ಚುನಾವಣಾ ಆಯೋಗದ ಎಚ್ಚರಿಕೆ

Update: 2024-05-10 16:26 GMT

 ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ : ಮತದಾನ ಪ್ರಮಾಣದ ದತ್ತಾಂಶಗಳ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಕ್ಷಗಳ ನಾಯಕರಿಗೆ ಬರೆದಿರುವ ಪತ್ರಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿರುವ ಚುನಾವಣಾ ಆಯೋಗವು,ಇದು ಸ್ಪಷ್ಟೀಕರಣಗಳನ್ನು ಕೇಳುವ ಸೋಗಿನಲ್ಲಿ ಪಕ್ಷಪಾತದ ನಿರೂಪಣೆಯನ್ನು ಮುಂದಕ್ಕೊತ್ತುವ ಪ್ರಯತ್ನವಾಗಿದೆ ಎಂದು ಹೇಳಿದೆ.

ತನ್ನ ಐದು ಪುಟಗಳ ಪ್ರತಿಕ್ರಿಯೆಯಲ್ಲಿ ಮತದಾನ ಪ್ರಮಾಣದ ದತ್ತಾಂಶಗಳನ್ನು ಬಿಡುಗಡೆಗೊಳಿಸುವಲ್ಲಿ ತಪ್ಪು ನಿರ್ವಹಣೆ ಮತ್ತು ವಿಳಂಬದ ಆರೋಪಗಳನ್ನು ನಿರಾಕರಿಸಿರುವ ಆಯೋಗವು,ಖರ್ಗೆಯವರ ಆರೋಪಗಳು ಅನಗತ್ಯ ಮತ್ತು ಆಧಾರರಹಿತವಾಗಿದ್ದು,ಗೊಂದಲವನ್ನು ಹರಡಲು ಪಕ್ಷಪಾತದಿಂದ ಕೂಡಿದ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತವೆ ಎಂದು ಬಣ್ಣಿಸಿದೆ.

ಚುನಾವಣಾ ಆಯೋಗವು ಬಿಡುಗಡೆಗೊಳಿಸಿದ ಮತದಾನ ದತ್ತಾಂಶಗಳಲ್ಲಿ ಆರೋಪಿತ ವ್ಯತ್ಯಾಸಗಳನ್ನು ಪ್ರಶ್ನಿಸಿ ಇತ್ತೀಚಿಗೆ ಇಂಡಿಯಾ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರಿಗೆ ಬರೆದಿದ್ದ ಪತ್ರದಲ್ಲಿ ಖರ್ಗೆ,‘ಪ್ರಜಾಪ್ರಭುತ್ವ ಮತ್ತು ಚುನಾವಣಾ ಆಯೋಗದ ಸ್ವತಂತ್ರ ಕಾರ್ಯ ನಿರ್ವಹಣೆಯನ್ನು ರಕ್ಷಿಸುವುದು ‘ಇಂಡಿಯಾ’ಮೈತ್ರಿಕೂಟವಾಗಿ ನಮ್ಮ ಸಾಮೂಹಿಕ ಪ್ರಯತ್ನವಾಗಬೇಕು. ಈ ವ್ಯತ್ಯಾಸಗಳು ಅಂತಿಮ ಫಲಿತಾಂಶಗಳನ್ನು ತಿರುಚುವ ಪ್ರಯತ್ನವೇ ಎನ್ನುವ ಪ್ರಶ್ನೆಯನ್ನು ಅನಿವಾರ್ಯವಾಗಿಸಿವೆ ’ ಎಂದು ಹೇಳಿದ್ದರು.

ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಕ್ರಿಯೆಯ ನಡುವೆ ಬಹಿರಂಗಗೊಳಿಸಲಾಗಿರುವ ಖರ್ಗೆಯವರ ಪತ್ರವು ಅತ್ಯಂತ ಅನಪೇಕ್ಷಿತವಾಗಿದೆ ಹಾಗೂ ಸುಗಮ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವಲ್ಲಿ ಗೊಂದಲವನ್ನು ಸೃಷ್ಟಿಸಲು, ದಾರಿ ತಪ್ಪಿಸಲು ಮತ್ತು ಅಡಚಣೆಗಳನ್ನೊಡ್ಡಲು ಅದನ್ನು ವಿನ್ಯಾಸಗೊಳಿಸಲಾಗಿದೆ . ಅಂತಿಮ ಫಲಿತಾಂಶಗಳನ್ನು ತಿರುಚುವ ಪ್ರಯತ್ನವೇ ಎಂದು ನೀವು ಪ್ರಶ್ನಿಸಿದಾಗ ಟೀಕೆಗಳು ಮತ್ತು ಪ್ರಚೋದನೆಗಳ ಮೂಲಕ ಪತ್ರದಲ್ಲಿನ ವಿಷಯಗಳು ಚುನಾವಣಾ ನಿರ್ವಹಣೆಗೆ ಸಂಬಂಧಿಸಿದಂತೆ ಅಸಂಗತತೆಗಳನ್ನು ಸೃಷ್ಟಿಸಬಹುದು. ಮತದಾರರು ಮತ್ತು ರಾಜಕೀಯ ಪಕ್ಷಗಳಲ್ಲಿ ಅನುಮಾನಗಳನ್ನು ಹುಟ್ಟು ಹಾಕಬಹುದು ಮತ್ತು ಸಂಭಾವ್ಯ ಅರಾಜಕತೆಯ ಸ್ಥಿತಿಯನ್ನು ಸೃಷ್ಟಿಸಬಹುದು. ಅಂತಹ ಯಾವುದೇ ಉದ್ದೇಶ ನಿಮಗಿಲ್ಲ ಎಂದು ಆಯೋಗವು ಆಶಿಸುತ್ತದೆ ಎಂದು ಹೇಳಿದೆ.

ಈ ನಡುವೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತನ್ನ ಎಕ್ಸ್ ಪೋಸ್ಟ್ನಲ್ಲಿ, ಕಾಂಗ್ರೆಸ್ ಅಧ್ಯಕ್ಷರು ಪರಿಪೂರ್ಣವಾಗಿ ಕಾನೂನುಬದ್ಧ ವಿಷಯಗಳನ್ನೇ ಪ್ರಸ್ತಾವಿಸಿದ್ದು,ಇವುಗಳ ಬಗ್ಗೆ ವ್ಯಾಪಕ ಕಳವಳಗಳು ಮತ್ತು ಟೀಕೆಗಳು ವ್ಯಕ್ತವಾಗಿವೆ. ಈ ವಿಷಯಗಳನ್ನು ಬಗೆಹರಿಸುವ ಬದಲು ಚುನಾವಣಾ ಆಯೋಗದ ನಿಲುವು ಅತ್ಯಂತ ವಿಷಾದನೀಯವಾಗಿದೆ ಎಂದು ಹೇಳಿದ್ದಾರೆ.

‘ಮೊದಲ ಎರಡು ಹಂತಗಳಲ್ಲಿಯ ಮತದಾನದ ಪ್ರವೃತ್ತಿಗಳಿಂದ ಮತ್ತು ತಮ್ಮ ಚುನಾವಣಾ ಭವಿಷ್ಯ ಮಸುಕುಗೊಳ್ಳುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹತಾಶಗೊಂಡಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ನಿರಂಕುಶ,ಅಧಿಕಾರದ ಮದ ನೆತ್ತಿಗೇರಿರುವ ಆಡಳಿತವು ಅಧಿಕಾರದಲ್ಲಿರಲು ಯಾವುದೇ ಮಟ್ಟಕ್ಕೂ ಹೋಗುತ್ತದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News