×
Ad

ಧಾರಾವಿ ಸಮೀಕ್ಷೆ | ಹಿರಿಯ ನಾಗರಿಕರು, ಅಂಗವಿಕಲರನ್ನು ಬೆದರಿಸಿ ಒಪ್ಪಿಗೆ ಪಡೆಯುತ್ತಿರುವ ಸಮೀಕ್ಷಕರು!

Update: 2025-07-18 17:29 IST

Screengrab:X/@VarshaEGaikwad

 

ಮುಂಬೈ: ಧಾರಾವಿಯಲ್ಲಿ ನಡೆಯುತ್ತಿರುವ ಪುನರ್ ಅಭಿವೃದ್ಧಿ ಯೋಜನೆಯ ಸಮೀಕ್ಷೆಯ ವಿರುದ್ಧ ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಧಾರಾವಿಯ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಂದ ಬಲವಂತವಾಗಿ ಸಮೀಕ್ಷಕರು ಒಪ್ಪಿಗೆ ಪಡೆಯುತ್ತಿದ್ದಾರೆ ಮತ್ತು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವರ್ಷಾ ಗಾಯಕ್ವಾಡ್, ಇದು ಸಮೀಕ್ಷೆಯಲ್ಲ, ಇದು ರಾಜ್ಯ ಸರಕಾರ ಪ್ರಾಯೋಜಿತ ಶೋಷಣೆ ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ʼಅದಾನಿ ಸಮೀಕ್ಷಕರು ಮನೆಯಲ್ಲಿ ಯುವಕರು ಇಲ್ಲದಿರುವಾಗ ಪ್ರವೇಶಿಸಿ ಹಿರಿಯ ನಾಗರಿಕರನ್ನು ಬೆದರಿಸಿ ಬಲವಂತವಾಗಿ ಒಪ್ಪಿಗೆ ಪಡೆಯುತ್ತಿದ್ದಾರೆʼ ಎಂದು ಗಾಯಕ್ವಾಡ್ ಆರೋಪಿಸಿದ್ದಾರೆ.

ಈ ಕುರಿತ ವೈರಲ್‌ ವೀಡಿಯೊದಲ್ಲಿ ಅಧಿಕಾರಿಯೋರ್ವ ವೃದ್ಧೆಯ ಕೈ ಹಿಡಿದು ಸಹಿ ಹಾಕುವಂತೆ ಸಹೋದ್ಯೋಗಿಗೆ ಹೇಳುವುದು ಮತ್ತು ಬಳಿಕ ಸಮೀಕ್ಷಕ ವೃದ್ಧೆಯ ಹೆಬ್ಬೆರಳನ್ನು ಹಿಡಿದು ಬಲವಂತವಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿರುವುದು ಕಂಡು ಬಂದಿದೆ.

ಮತ್ತೊಂದು ಕುಟುಂಬ ತಮ್ಮ ಅಂಗವಿಕಲ ಸದಸ್ಯರಿಗೆ ತೊಂದರೆ ನೀಡಲಾಗಿದೆ ಮತ್ತು ಅವರ ಅನುಮತಿಯಿಲ್ಲದೆ ಮನೆಗೆ ಸಮೀಕ್ಷೆ ನಂಬರ್ ಬರೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಇದು ರಾಜ್ಯ ಯೋಜಿತ ಶೋಷಣೆ, ಧಾರಾವಿಯ ಬಡವರನ್ನು ಹೆದರಿಸಿ,ಸ್ಥಳಾಂತರಿಸಿ ಮುಂಬೈಯ ಹೃದಯ ಭಾಗವನ್ನು ಪ್ರಧಾನಿ ಮೋದಿ ಅವರ ಸ್ನೇಹಿತ ಅದಾನಿಗೆ ಕೊಡುವ ಯೋಜನೆ. ಆದ್ದರಿಂದ ಸಮೀಕ್ಷೆಯನ್ನು ತಕ್ಷಣವೇ ನಿಲ್ಲಿಸಬೇಕು. ಧಾರಾವಿ ಎಂದಿಗೂ ತಲೆಬಾಗುವುದಿಲ್ಲ. ನಾವು ನಮ್ಮ ಹಿರಿಯರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ನಾವು ಅದಾನಿ ಸರಕಾರದ ವಿರುದ್ಧ ಎಂದು ವರ್ಷಾ ಗಾಯಕ್ವಾಡ್ ಹೇಳಿದ್ದಾರೆ.

ಏಷ್ಯಾದ ಅತಿ ದೊಡ್ಡ ಕೊಳಗೇರಿಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯನ್ನು ಅಭಿವೃದ್ಧಿಪಡಿಸುವ ಅದಾನಿ ಗ್ರೂಪ್ ಹಾಗೂ ಮಹಾರಾಷ್ಟ್ರ ಸರಕಾರದ ʼಧಾರಾವಿ ಪುನರ್ ಅಭಿವೃದ್ಧಿ ಯೋಜನೆʼಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದು ನಿಜವಾದ ಅಭಿವೃದ್ಧಿಯಲ್ಲ. ಲಾಭಕ್ಕಾಗಿ ಜಮೀನು ಕಬಳಿಸುವ ಯೋಜನೆಯಾಗಿದೆ ಎಂದು ಹಲವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News