ಇರಾನ್ ಜೊತೆ ಉದ್ವಿಗ್ನತೆ ; ಮಧ್ಯಪ್ರಾಚ್ಯದಿಂದ ಸೇನಾ ಸಿಬ್ಬಂದಿಗಳನ್ನು ಹಿಂದೆಗೆದುಕೊಳ್ಳಲಿರುವ ಅಮೆರಿಕ
ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಮಧ್ಯಪ್ರಾಚ್ಯವನ್ನು ‘ಅಪಾಯಕಾರಿ ಸ್ಥಳ’ ಎಂದು ಬುಧವಾರ ಬಣ್ಣಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,ಆ ಪ್ರದೇಶದಿಂದ ಕೆಲವು ಅಮೆರಿಕನ್ ಯೋಧರನ್ನು ಸ್ಥಳಾಂತರಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಇರಾನ್ ಅಣ್ವಸ್ತ್ರಗಳನ್ನು ಹೊಂದಲು ಅಮೆರಿಕವು ಅವಕಾಶ ನೀಡುವುದಿಲ್ಲ ಎಂದೂ ಅವರು ಘೋಷಿಸಿದ್ದಾರೆ.
ಅಮೆರಿಕವು ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನೂ ಭಾಗಶಃ ತೆರವುಗೊಳಿಸುತ್ತಿದ್ದು, ಪ್ರಾದೇಶಿಕ ಭದ್ರತಾ ಅಪಾಯಗಳು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯವನ್ನು ತೊರೆಯುವಂತೆ ರಾಯಭಾರ ಕಚೇರಿಯ ಎಲ್ಲ ಅನಗತ್ಯ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ಸೂಚಿಸಿದೆ. ಅಮೆರಿಕ ಮತ್ತು ಇರಾಕಿ ಮೂಲಗಳು ರಾಯ್ಟರ್ಸ್ ಸುದ್ದಿಸಂಸ್ಥೆಗೆ ಈ ಬೆಳವಣಿಗೆಯನ್ನು ದೃಢಪಡಿಸಿವೆ.
ಆದರೆ ಅಮೆರಿಕ ತನ್ನ ಸಿಬ್ಬಂದಿಗೆ ದೇಶವನ್ನು ತೊರೆಯುವಂತೆ ಆದೇಶಿಸಿದಾಗ ಯಾವ ರೀತಿಯ ಅಪಾಯವನ್ನು ಬೆಟ್ಟು ಮಾಡಿತ್ತು ಎನ್ನುವುದನ್ನು ವರದಿಯು ಉಲ್ಲೇಖಿಸಿಲ್ಲ,ಆದರೆ ವರದಿಗಳಿಂದಾಗಿ ತೈಲಬೆಲೆಗಳಲ್ಲಿ ಶೇ.4ಕ್ಕೂ ಅಧಿಕ ಏರಿಕೆಯಾಗಿದೆ.
ಬಾಗ್ದಾದ್‌ನಲ್ಲಿಯ ರಾಯಭಾರ ಕಚೇರಿಯ ಅನಗತ್ಯ ಸಿಬ್ಬಂದಿಗಳ ಭಾಗಶಃ ಸ್ಥಳಾಂತರದ ಕುರಿತು ಪ್ರಶ್ನೆಗೆ ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಅವರು,ವಿದೇಶಾಂಗ ಇಲಾಖೆಯು ವಿದೇಶಗಳಲ್ಲಿಯ ಅಮೆರಿಕದ ಸಿಬ್ಬಂದಿಗಳನ್ನು ನಿಯಮಿತವಾಗಿ ಪರಿಶೀಲಿಸುತ್ತದೆ ಮತ್ತು ಇತ್ತೀಚಿನ ಪರಿಶೀಲನೆ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.
‘ಅದು ಅಪಾಯಕಾರಿ ಸ್ಥಳವಾಗಬಹುದು ಎಂಬ ಕಾರಣಕ್ಕೆ ಸಿಬ್ಬಂದಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಮತ್ತು ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಸ್ಥಳಾಂತರಗೊಳ್ಳುವಂತೆ ನಾವು ಸೂಚನೆ ನೀಡಿದ್ದೇವೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ತಿಳಿಸಿದರು.
ಮಧ್ಯಪ್ರಾಚ್ಯದಲ್ಲಿ ಅಪಾಯವನ್ನು ತಗ್ಗಿಸಲು ಏನಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್,ತುಂಬ ಸರಳ,ಅವರು ಅಣ್ವಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಇರಾನ್‌ನ್ನು ಉಲ್ಲೇಖಿಸಿ ಹೇಳಿದರು.
ಅಮೆರಿಕದ ವಿದೇಶಾಂಗ ಇಲಾಖೆಯೂ ಬುಧವಾರ ತನ್ನ ಪ್ರಯಾಣ ಸಲಹೆಯನ್ನು ನವೀಕರಿಸಿದ್ದು, ಪ್ರಾದೇಶಿಕ ಉದ್ವಿಗ್ನತೆಗಳು ಉಲ್ಬಣಗೊಂಡಿರುವುದರಿಂದ ಅನಗತ್ಯ ಸಿಬ್ಬಂದಿಗಳಿಗೆ ನಿರ್ಗಮಿಸುವಂತೆ ಜೂ.11ರಂದು ಆದೇಶಿಸಲಾಗಿದೆ ಎಂದು ತಿಳಿಸಿದೆ.
ಇರಾಕ್ ಜೊತೆ ಬೆಹರಿನ್ ಮತ್ತು ಕುವೈತ್‌ನಿಂದಲೂ ಸಿಬ್ಬಂದಿಗಳ ಸ್ವಯಂಪ್ರೇರಿತ ನಿರ್ಗಮನಕ್ಕೆ ವಿದೇಶಾಂಗ ಇಲಾಖೆಯು ಅನುಮತಿ ನೀಡಿದೆ ಎಂದು ಅಮೆರಿಕದ ಅಧಿಕಾರಿಯೋರ್ವರು ತಿಳಿಸಿದರು.
ತನ್ನ ಸಿಬ್ಬಂದಿಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಕಚೇರಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕುವೈತ್‌ನಲ್ಲಿಯ ಅಮೆರಿಕ ರಾಯಭಾರ ಕಚೇರಿಯು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ 18 ತಿಂಗಳುಗಳಿಂದ ಇಸ್ರೇಲ್-ಗಾಝಾ ಯುದ್ಧದಿಂದಾಗಿ ಮಧ್ಯಪ್ರಾಚ್ಯವು ಈಗಾಗಲೇ ಉಧ್ವಸ್ಥಗೊಂಡಿರುವ ಮತ್ತು ಇರಾನ್ ಜೊತೆ ಪರಮಾಣು ಒಪ್ಪಂದ ಮಾಡಿಕೊಳ್ಳುವಲ್ಲಿ ಅಮೆರಿಕದ ಅಸಮರ್ಥತೆಯ ನಡುವೆ ಬಾಗ್ದಾದ್‌ನಿಂದ ಸಿಬ್ಬಂದಿಗಳನ್ನು ಭಾಗಶಃ ತೆರವುಗೊಳಿಸುವ ನಿರ್ಧಾರ ಹೊರಬಿದ್ದಿದೆ.
ಬುಧವಾರ ಪಾಡ್‌ಕಾಸ್ಟ್‌ನಲ್ಲಿ ಇರಾನಿನ ಪರಮಾಣು ಕಾರ್ಯಕ್ರಮದ ಬಗ್ಗೆ ವಿವರಿಸಿದ ಟ್ರಂಪ್, ಅದರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ವಿಶ್ವಾಸ ಕಡಿಮೆಯಾಗುತ್ತಿದೆ. ಇರಾನ್ ತನ್ನ ಯುರೇನಿಯಂ ಸಮೃದ್ಧೀಕರಣವನ್ನು ನಿಲ್ಲಿಸಬೇಕೆಂದು ಅಮೆರಿಕ ಬಯಸುತ್ತದೆ,ಇದಕ್ಕೆ ಪ್ರತಿಯಾಗಿ ಅದರ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.
ಈ ನಡುವೆ ಇಸ್ರೇಲ್ ಇರಾನಿನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಸೂಚಿಸಿವೆ ಎಂದು ವರದಿಯಾಗಿದೆ.
ಪರಮಾಣು ಒಪ್ಪಂದ ಕುರಿತು ಮಾತುಕತೆಗಳು ವಿಫಲಗೊಂಡರೆ ಇರಾನ್ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಪದೇ ಪದೇ ಬೆದರಿಕೆಯೊಡ್ಡಿದ್ದಾರೆ. ಇರಾನ್ ಮೇಲೆ ದಾಳಿ ನಡೆದರೆ ಪ್ರತೀಕಾರವಾಗಿ ಪ್ರದೇಶದಲ್ಲಿನ ಅಮೆರಿಕದ ನೆಲೆಗಳನ್ನು ನಾಶಗೊಳಿಸುವುದಾಗಿ ಇರಾನ್ ರಕ್ಷಣಾ ಸಚಿವ ಅಝೀಝ್ ನಾಸಿರ್‌ಜಾದೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.