ಭಾರತ-ಪಾಕಿಸ್ತಾನ ನಡುವೆ ಉಲ್ಬಣಗೊಂಡ ಉದ್ವಿಗ್ನತೆ: ದೇಶದ ಶತ್ರುಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ರಾಜ್ ನಾಥ್ ಸಿಂಗ್ ಪ್ರತಿಜ್ಞೆ
ರಾಜ್ ನಾಥ್ ಸಿಂಗ್ | PC : PTI
ಹೊಸದಿಲ್ಲಿ: 26 ಮಂದಿಯನ್ನು ಬಲಿ ಪಡೆದ ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಬೆನ್ನಿಗೇ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ವಿಷಮಿಸುತ್ತಿದ್ದು, ಭಾರತಕ್ಕೆ ಹಾನಿಯನ್ನುಂಟು ಮಾಡುವ ಧೈರ್ಯ ತೋರುವ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ರವಿವಾರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಘೋಷಿಸಿದ್ದಾರೆ.
ದಿನಕಳೆದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುತ್ತಾ ಸಾಗುತ್ತಿರುವುದರಿಂದ, ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಇದಕ್ಕೂ ಮುನ್ನ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸ್ವತಃ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸೇರಿದಂತೆ ಹಲವು ಉನ್ನತ ಭಾರತೀಯ ನಾಯಕರು ಪ್ರತಿಜ್ಞೆ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, “ನನ್ನ ದೇಶದ ಮೇಲೆ ದಾಳಿ ನಡೆಸುವ ಧೈರ್ಯ ತೋರುವವರಿಗೆ ತಕ್ಕ ಪ್ರತ್ಯುತ್ತರ ನೀಡುವುದು ನನ್ನ ಜವಾಬ್ದಾರಿಯಾಗಿದೆ. ನಿಮಗೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿಯ ಕೆಲಸದ ಬಗೆಗಿನ ನೈತಿಕ ಬದ್ಧತೆ ಹಾಗೂ ಕಠಿಣ ಪರಿಶ್ರಮದ ಬಗ್ಗೆ ತಿಳಿದೇ ಇದೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಕಳೆದವಾರ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಬಗೆಯ ಸೇನಾ ಕಾರ್ಯಾಚರಣೆ ನಡೆಸುವ ಸ್ವಾತಂತ್ರ್ಯವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ನೀಡಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ ಎಂದು India Today TV ವರದಿ ಮಾಡಿದೆ.