ಆಂಧ್ರಪ್ರದೇಶ | ದಸರಾ ಮೆರವಣಿಗೆಯ ವೇಳೆ ರಥ ಉರುಳಿ ಬಿದ್ದು ಓರ್ವ ಮೃತ್ಯು, ಹಲವರಿಗೆ ಗಾಯ
Update: 2025-10-03 21:47 IST
Photo Credit : NDTV
ಕರ್ನೂಲ್,ಅ.3: ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ ಗುರುವಾರ ದಸರಾ ಉತ್ಸವದ ಮೆರವಣಿಗೆಯ ಸಂದರ್ಭ ಸಂಭವಿಸಿದ ದುರಂತದಲ್ಲಿ ದೇವಾಲಯದ ರಥವು ಮಗುಚಿಬಿದ್ದು ಓರ್ವ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕರ್ನೂಲ್ ಜಿಲ್ಲೆಯ ಕಂದನಾದಿ ಗ್ರಾಮದ ಲಕ್ಷ್ಮಿ ಚೆನ್ನಕೇಶವ ಸ್ವಾಮಿ ದೇವಾಲಯದ ರಥವನ್ನು ಬೆಟ್ಟ ಜಾಗದಲ್ಲಿ ಎಳೆಯುತ್ತಿದ್ದಾಗ ಅದು ಉರುಳಿಬಿದ್ದು, ದುರಂತ ಸಂಭವಿಸಿದೆ.
ಮರದ ರಥವು ಜನರ ಮೇಲೆ ಉರುಳುವ ಮುನ್ನ ಅಪಾಯಕಾರಿ ರೀತಿಯಲ್ಲಿ ವಾಲಿರುವ ದೃಶ್ಯದ ವೀಡಿಯೊಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಓರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ಎಮಿಗಾನೂರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಥೋತ್ಸವವನ್ನು ವೀಕ್ಷಿಸಲು ಆಸುಪಾಸಿನ ನಾಲ್ಕು ಹಳ್ಳಿಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.