ಆಂಧ್ರ ಪ್ರದೇಶ|ಹಾಸ್ಟೆಲ್‌ನಲ್ಲಿ ದಲಿತ ವಿದ್ಯಾರ್ಥಿಗೆ ಥಳಿಸಿ ವಿದ್ಯುತ್ ಶಾಕ್ ನೀಡಲು ಯತ್ನಿಸಿದ ಹಿರಿಯ ವಿದ್ಯಾರ್ಥಿಗಳು!
Photo | NDTV
ದಾಚೆಪಲ್ಲಿ : ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ಸರಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಆರು ಮಂದಿ ವಿದ್ಯಾರ್ಥಿಗಳು ಸೇರಿಕೊಂಡು ಓರ್ವ ದಲಿತ ವಿದ್ಯಾರ್ಥಿಗೆ ಥಳಿಸಿ ವಿದ್ಯುತ್ ಶಾಕ್ ನೀಡಲು ಪ್ರಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಈ ಘಟನೆ ಆಗಸ್ಟ್ 7ರಂದು ನಡೆದಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿ ಬಾಲಕಿಯೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದು ಆರು ಮಂದಿ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೊದಲ್ಲಿ ಬಾಲಕನಿಗೆ ಅಮಾನವೀಯವಾಗಿ ಥಳಿಸುತ್ತಿರುವುದು ಕಂಡು ಬಂದಿದೆ. ಓರ್ವ ವಿದ್ಯಾರ್ಥಿ ಈ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ ಎಂದು ಹೇಳಲಾಗಿದೆ.
ಘಟನೆ ನಡೆದಿರುವುದನ್ನು ಹಾಸ್ಟೆಲ್‌ನ ಮೇಲ್ವಿಚಾರಕಿ ಎಂ. ದೀಪಿಕಾ ಅವರು ಖಚಿತಪಡಿಸಿದ್ದಾರೆ. ಆರೋಪಿಗಳು ವಿದ್ಯುತ್ ಶಾಕ್ ನೀಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಈ ಕೃತ್ಯ ವೀಡಿಯೊದಲ್ಲಿ ಸೆರೆಯಾಗಿಲ್ಲ ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಿಎನ್ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಈ ಕುರಿತು ಪ್ರತಿಕ್ರಿಯಿಸಿದ್ದು, ಪಲ್ನಾಡು ಜಿಲ್ಲೆಯ ದಾಚೆಪಲ್ಲಿಯಲ್ಲಿರುವ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಬಲಿಪಶುವನ್ನು ಕೊಠಡಿಯೊಳಗೆ ಕೂಡಿಹಾಕಿ, ಅಮಾನವೀಯವಾಗಿ ಥಳಿಸಿ, ವಿದ್ಯುತ್ ಆಘಾತದ ಬೆದರಿಕೆ ಹಾಕಲಾಗಿದೆ. ವಸತಿ ನಿಲಯದ ದೃಶ್ಯವು ಭಯಾನಕವಾಗಿದೆ. ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.