ರಾಜಸ್ಥಾನ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ
ಜೈಪುರ: ರಾಜಸ್ಥಾನ ಕಾನೂನು ಬಾಹಿರ ಧಾರ್ಮಿಕ ಮತಾಂತರ ಮಸೂದೆಯನ್ನು ಸದ್ಯ ರಾಜಸ್ಥಾನ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸೋಮವಾರ ಮಂಡಿಸಲಾಗಿದೆ.
ಈ ಮತಾಂತರ ನಿಷೇಧ ಮಸೂದೆಯ ಪ್ರಕಾರ, ಕಾನೂನು ಬಾಹಿರ ಮತಾಂತರವು ಸಂಜ್ಞೇಯ, ಜಾಮೀನುರಹಿತ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡುವ ಅಪರಾಧವಾಗಿದೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರವಾಗುವುದನ್ನು ತಡೆಯುವ ಉದ್ದೇಶವನ್ನು ಈ ಮಸೂದೆ ಹೊಂದಿದ್ದು, ಈ ಅಪರಾಧಕ್ಕೆ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ 50,000 ರೂ.ವರೆಗಿನ ದಂಡ ವಿಧಿಸಬಹುದಾಗಿದೆ.
ಈ ಮಸೂದೆಯನ್ನು ರಾಜ್ಯ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ವ್ ಸರಂದ್ ಮಂಡಿಸಿದ್ದು, ಈ ಕುರಿತು ಅಧಿವೇಶದಲ್ಲಿ ಚರ್ಚೆ ನಡೆದ ನಂತರ, ಮಸೂದೆಗೆ ಅನುಮೋದನೆ ದೊರೆಯಲಿದೆ.
ತಪ್ಪು ನಿರ್ವಚನೆ, ಒತ್ತಡ, ಅನುಚಿತ ಪ್ರಭಾವ, ಬಲವಂತ, ಆಮಿಷ ಅಥವಾ ಇನ್ನಾವುದೇ ವಂಚಕ ಮಾರ್ಗಗಳ ಮೂಲಕ ಮಾಡಲಾಗುವ ಮತಾಂತರಗಳನ್ನು ಅಪರಾಧ ಎಂದು ಈ ಮಸೂದೆಯಲ್ಲಿ ಪರಿಗಣಿಸಲಾಗಿದೆ.