×
Ad

2024ರಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣಗಳಲ್ಲಿ ಶೇ. 74ರಷ್ಟು ಏರಿಕೆ: ಸಂಶೋಧನಾ ವರದಿ

Update: 2025-02-10 20:42 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯ ಆಸುಪಾಸಿನಲ್ಲಿ, ಮುಸ್ಲಿಮರಂತಹ ಸಮುದಾಯಗಳ ವಿರುದ್ಧದ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣಗಳ ನಿದರ್ಶನ 2024ರಲ್ಲಿ ಶೇ. 74ರಷ್ಟು ಏರಿಕೆಯಾಗಿದೆ ಎಂದು ಸೋಮವಾರ ವಾಶಿಂಗ್ಟನ್ ಮೂಲದ ಸಂಶೋಧನಾ ಗುಂಪೊಂದು ಬಹಿರಂಗಪಡಿಸಿದೆ.

ರಾಜಕೀಯ ಸಮಾವೇಶಗಳು, ಧಾರ್ಮಿಕ ಮೆರವಣಿಗಳು, ಪ್ರತಿಭಟನಾ ಪಾದಯಾತ್ರೆಗಳು ಹಾಗೂ ಸಾಂಸ್ಕೃತಿಕ ಸಭೆಗಳಂತಹ ಕಾರ್ಯಕ್ರಮಗಳು ನಡೆದಿದ್ದ 2023ರಲ್ಲಿನ ದ್ವೇಷ ಭಾಷಣ ಎಂದು ಪರಿಗಣಿಸಲಾಗುವ 668 ನಿದರ್ಶನಗಳಿಗೆ ಹೋಲಿಸಿದರೆ, 2024ರಲ್ಲಿ ಈ ಸಂಖ್ಯೆಯು 1,165ಕ್ಕೆ ಏರಿಕೆಯಾಗಿದೆ ಎಂದು India Hate Lab ದಾಖಲಿಸಿದೆ.

“2024 ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ವರ್ಷವಾಗಿದ್ದು, ಎಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಈ ಅವಧಿಯು 2023ಕ್ಕೆ ಹೋಲಿಸಿದರೆ, ದ್ವೇಷ ಭಾಷಣ ಘಟನೆಗಳ ಸ್ವರೂಪವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು” ಎಂದು India Hate Lab ತನ್ನ ವರದಿಯಲ್ಲಿ ಹೇಳಿದೆ.

ತಮ್ಮ ಸರಕಾರದಲ್ಲಿ ಭಾರತದಲ್ಲಿನ ಅಲ್ಪಸಂಖ್ಯಾತರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹಾಗೂ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಘಟನೆಗಳು ಸೇರಿದಂತೆ ವಿವಿಧ ಮಾನವ ಹಕ್ಕು ಸಂಘಟನೆಗಳಿಂದ ದೂಷಣೆಗೊಳಗಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶ್ವೇತ ಭವನದಲ್ಲಿ ನಡೆಯಲಿರುವ ಸಭೆಗೂ ಮುನ್ನ ಈ ವರದಿ ಬಹಿರಂಗಗೊಂಡಿದೆ.

ಆದರೆ, ಈ ತಾರತಮ್ಯದ ಆರೋಪಗಳನ್ನು ಅಲ್ಲಗಳೆದಿರುವ ಮೋದಿ ಸರಕಾರ ಹಾಗೂ ಬಿಜೆಪಿ ಪಕ್ಷವು, ಆಹಾರ ಸಹಾಯ ಧನ ಯೋಜನೆ ಹಾಗೂ ವಿದ್ಯುದೀಕರಣದಂತಹ ನಮ್ಮ ನೀತಿಗಳಿಂದ ಎಲ್ಲ ಭಾರತೀಯರಿಗೂ ಪ್ರಯೋಜನವಾಗುತ್ತಿದೆ ಎಂದು ಸ್ಪಷ್ಟನೆ ನೀಡಿವೆ.

ದ್ವೇಷ ಭಾಷಣ ಘಟನೆಗಳ ಪೈಕಿ ಮೂರನೆ ಒಂದರಷ್ಟು ಘಟನೆಗಳು ಚುನಾವಣಾ ಪ್ರಚಾರಗಳ ಉಚ್ಛ್ರಾಯ ಘಟ್ಟವಾಗಿದ್ದ ಕಳೆದ ವರ್ಷದ ಮಾರ್ಚ್ 16ರಿಂದ ಜೂನ್ 1ರವರೆಗೆ ನಡೆದಿವೆ ಎಂದು India Hate Lab ಹೇಳಿದೆ.

ಮುಸ್ಲಿಮರು ನುಸುಳುಕೋರರಾಗಿದ್ದು, ಅವರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂದು ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಈ ಸಂಶೋಧನಾ ಗುಂಪು ಉಲ್ಲೇಖಿಸಿದೆ.

ಸತತ ಮೂರನೆಯ ಬಾರಿಗೆ ಗೆಲುವು ಸಾಧಿಸಿದ್ದ ನರೇಂದ್ರ ಮೋದಿ, ವಿಭಜನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪಗಳನ್ನು ಅಲ್ಲಗಳೆದಿದ್ದರು. ಆದರೆ, ಬಹುಮತ ಗಳಿಸುವಲ್ಲಿ ವಿಫಲವಾಗಿದ್ದ ಅವರ ಬಿಜೆಪಿ ಪಕ್ಷವು, ಸರಕಾರ ರಚಿಸಲು ಮೈತ್ರಿ ಪಕ್ಷಗಳನ್ನು ಅವಲಂಬಿಸಬೇಕಾಗಿ ಬಂದಿತ್ತು.

ಕಳೆದ ವರ್ಷ ನಡೆದಿರುವ ದ್ವೇಷ ಭಾಷಣ ಘಟನೆಗಳ ಪೈಕಿ ಶೇ. 80ರಷ್ಟು ದ್ವೇಷ ಭಾಷಣ ಘಟನೆಗಳು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಆಡಳಿತಾರೂಢವಾಗಿರುವ ರಾಜ್ಯಗಳಲ್ಲಿ ನಡೆದಿದೆ ಎಂದು India Hate Lab ಹೇಳಿದೆ.

ಈ ಗುಂಪನ್ನು ಅಮೆರಿಕ ಮೂಲದ ಕಾಶ್ಮೀರ ಪತ್ರಕರ್ತ ರಕೀಬ್ ಹಮೀದ್ ನಾಯಕ್ ಸ್ಥಾಪಿಸಿದ್ದು, ಇದು ಸಂಘಟಿತ ದ್ವೇಷ ಅಧ್ಯಯನ ಕೇಂದ್ರದ ಯೋಜನೆಯಾಗಿದೆ. ಈ ಗುಂಪು ವಾಶಿಂಗ್ಟನ್ ಮೂಲದ ಲಾಭರಹಿತ ಚಿಂತಕರ ಚಾವಡಿಯಾಗಿದೆ.

ಆದರೆ, ಈ ವರದಿಯನ್ನು ಅಲ್ಲಗಳೆದಿರುವ ಬಿಜೆಪಿ, ಈ ಗುಂಪು ಭಾರತದ ಪಕ್ಷಪಾತಿ ಚಿತ್ರಣವನ್ನು ಮಂಡಿಸಿದೆ ಎಂದು ಪ್ರತ್ಯಾರೋಪ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News